ನೇಷನ್ಸ್ ಕಪ್ ಹಾಕಿ ಪ್ರಶಸ್ತಿ ಗೆದ್ದ ಭಾರತದ ಮಹಿಳೆಯರು; ಮುಂದಿನ ವರ್ಷದ ಪ್ರೊ ಲೀಗ್ಗೆ ಬಡ್ತಿ
ಆಕ್ಲೆಂಡ್: ಭಾರತ ತಂಡ ಮಹಿಳೆಯರ ನೇಷನ್ಸ್ ಕಪ್ ಹಾಕಿ (FIH women''s Nations Cup) ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಮುಂದಿನ ವರ್ಷದ ಎಫ್ಐಎಚ್ ಮಹಿಳಾ ಪ್ರೊ ಲೀಗ್ಗೆ ಬಡ್ತಿ ಪಡೆದಿದೆ. ಭಾರತ ತಂಡ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ವಿರುದ್ಧ 2-0 ಅಂತರದಿಂದ ಗೆಲುವು ದಾಖಲಿಸಿತು.
ಭಾರತ ಪರ ನವನೀತ್ ಕೌರ್ (4ನೇ ನಿಮಿಷ) ಮತ್ತು ಸುನೆಲಿತ ಟೊಪ್ಪೊ (15) ತಲಾ ಒಂದು ಗೋಲು ಬಾರಿಸಿದರು. ರಕ್ಷಣಾ ವಿಭಾಗದಲ್ಲಿ ಅದ್ಭುತ ನಿರ್ವಹಣೆ ತೋರಿಸಿ ಪ್ರಾಬಲ್ಯ ಮೆರೆದ ಭಾರತ ಟೂರ್ನಿಯಲ್ಲಿ ಆಡಿದ ಎಲ್ಲ 5 ಪಂದ್ಯಗಳಲ್ಲೂ ಗೆದ್ದ ಸಾಧನೆ ಮಾಡಿತು. ಕಳೆದ ವರ್ಷದ ಪ್ರೊ ಲೀಗ್ನಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟ ಕಾರಣ ಭಾರತ ತಂಡ ನೇಷನ್ಸ್ ಕಪ್ಗೆ ಹಿಂಬಡ್ತಿ ಪಡೆದಿತ್ತು. ಭಾರತದ ಲಾಲ್ರೆಮ್ಸಿಯಾಮಿ ಫೈನಲ್ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ದೀಪಿಕಾ ಸೆಹ್ರಾವತ್ ಟೂರ್ನಿಯಲ್ಲಿ ಸರ್ವಾಧಿಕ 6 ಗೋಲು ಸಿಡಿಸಿದ ಸಾಧನೆ ಮಾಡಿದರು. ಭಾರತಕ್ಕೆ ಇದು 2ನೇ ನೇಷನ್ಸ್ ಕಪ್ ಗೆಲುವಾಗಿದೆ. ಈ ಮುನ್ನ 2022ರಲ್ಲಿ ಮೊದಲ ಸಲ ಈ ಪ್ರಶಸ್ತಿ ಜಯಿಸಿತ್ತು.
ಹಾಕಿ ಇಂಡಿಯಾ ಬಹುಮಾನ: ನೇಷನ್ಸ್ ಕಪ್ ಗೆದ್ದ ಭಾರತ ಮಹಿಳಾ ತಂಡದ ಎಲ್ಲ ಆಟಗಾರ್ತಿಯರಿಗೆ ತಲಾ 3 ಲಕ್ಷ ರೂ. ಮತ್ತು ತರಬೇತಿ ಸಿಬ್ಬಂದಿಗೆ ತಲಾ 1.5 ಲಕ್ಷ ರೂ. ಬಹುಮಾನವನ್ನು ಹಾಕಿ ಇಂಡಿಯಾ ಪ್ರಕಟಿಸಿದೆ.