ಹಾಕಿ ವಿಶ್ವಕಪ್: ಭಾರತ ಭರ್ಜರಿ ಗೆಲುವಿನ ಆರಂಭ, ನಾಯಕ ಹರ್ಮಾನ್‌ಪ್ರೀತ್ ಅವಳಿ ಗೋಲಿನ ಕಮಾಲ್ 
ಹಾಕಿ

ಹಾಕಿ ವಿಶ್ವಕಪ್: ಭಾರತ ಭರ್ಜರಿ ಗೆಲುವಿನ ಆರಂಭ, ನಾಯಕ ಹರ್ಮಾನ್‌ಪ್ರೀತ್ ಅವಳಿ ಗೋಲಿನ ಕಮಾಲ್

ಆಮ್‌ಸ್ಟೆಲ್ವೀನ್ (ನೆದರ್ಲ್ಯಾಂಡ್ಸ್):

ನಾಯಕ ಹರ್ಮಾನ್‌ಪ್ರೀತ್ ಸಿಂಗ್ (11, 43ನೇ ನಿಮಿಷ) ಸಿಡಿಸಿದ ಅವಳಿ ಗೋಲಿನ ಬಲದಿಂದ ಭಾರತ ತಂಡ ಎ್ಐಎಚ್ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಶುಭಾರಂಭ ಕಂಡಿದೆ. ಶನಿವಾರ ನಡೆದ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ವೇಲ್ಸ್ ವಿರುದ್ಧ 3-1 ಅಂತರದಿಂದ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಹರ್ಮಾನ್‌ಪ್ರೀತ್ ಪಡೆ ಸ್ವಾತಂತ್ರ್ಯ ದಿನದಂದು ಭಾರತೀಯರಿಗೆ ಗೆಲುವಿನ ಉಡುಗೊರೆ ನೀಡಿತು.


ಕೇಸರಿ ಬಣ್ಣದ ಹೊಸ ಜೆರ್ಸಿಯೊಂದಿಗೆ ವ್ಯಾಗನರ್ ಸ್ಟೇಡಿಯಂನಲ್ಲಿ ಸುಮಾರು 10 ಸಾವಿರ ಪ್ರೇಕ್ಷಕರ ಎದುರು ಕಣಕ್ಕಿಳಿದ ಭಾರತ ತಂಡ, ಪಂದ್ಯದ ಬಹುತೇಕ ಅವಧಿ ಪ್ರಾಬಲ್ಯ ಸಾಧಿಸಿತು. ಡಿ ಗುಂಪಿನ ಕಾದಾಟದಲ್ಲಿ ಭಾರತ ಮೊದಲಾರ್ಧದಲ್ಲೇ 2-0 ಮುನ್ನಡೆ ಸಾಧಿಸಿತು. 8ನೇ ನಿಮಿಷದಲ್ಲಿ ಸಂಜಯ್ ರಾಣಾ ಭಾರತಕ್ಕೆ ಮೊದಲ ಗೋಲು ತಂದುಕೊಟ್ಟರು. ನಂತರ ಹರ್ಮಾನ್‌ಪ್ರೀತ್ ಅವಳಿ ಗೋಲು ಬಾರಿಸಿದರು. ಭಾರತದ ಮೂರೂ ಗೋಲುಗಳು ಪೆನಾಲ್ಟಿ ಕಾರ್ನರ್ ಮೂಲಕ ದಾಖಲಾದವು. 56ನೇ ನಿಮಿಷದಲ್ಲಿ ಸ್ಯಾಮ್ ವೆಲ್ಶ್ ಅವರು ವೇಲ್ಸ್ ಪರ ಏಕೈಕ ಗೋಲು ಸಿಡಿಸಿ ಸೋಲಿನ ಅಂತರ ತಗ್ಗಿಸಿದರು. ಹರ್ಮಾನ್‌ಪ್ರೀತ್ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
ಪಂದ್ಯದ ಆರಂಭದಲ್ಲಿ ವೇಲ್ಸ್ ತಂಡ ಆಕ್ರಮಣಕಾರಿ ಆಟಕ್ಕಿಳಿಯಿತು. ಭಾರತದ ಗೋಲು ಪೆಟ್ಟಿಗೆ ಮೇಲೆ ಸತತ ದಾಳಿಯನ್ನೂ ನಡೆಸಿತು. ಇದಕ್ಕೆ ಭಾರತದ ರಕ್ಷಣಾ ವಿಭಾಗ ಸಮರ್ಥ ತಿರುಗೇಟು ಕೂಡ ನೀಡಿತು.
ಪಂದ್ಯದ 7ನೇ ನಿಮಿಷದಲ್ಲಿ ಭಾರತಕ್ಕೆ ದೊರೆತ ಮೊದಲ ಪೆನಾಲ್ಟಿ ಕಾರ್ನರ್‌ನಲ್ಲಿ, ಚೊಚ್ಚಲ ವಿಶ್ವಕಪ್ ಆಡುತ್ತಿರುವ 25 ವರ್ಷದ ಸಂಜಯ್ ಡೈರೆಕ್ಟ್ ಡ್ರಾೃಗ್‌ಫ್ಲಿಕ್ ಮೂಲಕ ಗೋಲು ಬಾರಿಸಿ ಭಾರತಕ್ಕೆ ಮುನ್ನಡೆ ಒದಗಿಸಿದರು. 10ನೇ ನಿಮಿಷದಲ್ಲಿ ಜರ್ಮನ್‌ಪ್ರೀತ್ ಸಿಂಗ್‌ಗೆ ಭಾರತದ ಮುನ್ನಡೆ ಹಿಗ್ಗಿಸುವ ಅವಕಾಶ ಲಭಿಸಿತು. ಆದರೆ ಅವರು ಬಾರಿಸಿದ ಚೆಂಡು ಗೋಲು ಪೆಟ್ಟಿಗೆಗಿಂತ ಸ್ವಲ್ಪ ದೂರ ಹೊರಹೋಯಿತು. ಮರುನಿಮಿಷದಲ್ಲೇ ಹರ್ಮಾನ್‌ಪ್ರೀತ್ ಭಾರತದ ಮುನ್ನಡೆ ವಿಸ್ತರಿಸಿದರು. ಬೆನ್ನಲ್ಲೇ ವೇಲ್ಸ್ ರಕ್ಷಣಾತ್ಮಕ ಆಟಕ್ಕಿಳಿಯಿತು. 14ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಹರ್ಮಾನ್‌ಪ್ರೀತ್ ವ್ಯರ್ಥಗೊಳಿಸಿದರು.
2ನೇ ಕ್ವಾರ್ಟರ್‌ನ ಆರಂಭದಲ್ಲಿ, ಭಾರತ ಪರ 417ನೇ ಪಂದ್ಯ ಆಡಿದ ಅನುಭವಿ ಆಟಗಾರ ಮನ್‌ಪ್ರೀತ್ ಸಿಂಗ್ ಮತ್ತೊಂದು ಪೆನಾಲ್ಟಿ ಕಾರ್ನರ್ ತಂದುಕೊಟ್ಟರು. ಆದರೆ ಇದು ಗೋಲಾಗಿ ಪರಿವರ್ತನೆ ಆಗಲಿಲ್ಲ. 19ನೇ ನಿಮಿಷದಲ್ಲಿ ವೇಲ್ಸ್ ಮೊದಲ ಗೋಲು ಸಿಡಿಸುವ ಸನಿಹ ತಲುಪಿತ್ತು. ಆದರೆ ಆದಕ್ಕೆ ಬದಲಿ ಗೋಲು ಕೀಪರ್ ಎಚ್.ಎಸ್. ಮೋಹಿತ್ ಮತ್ತು ಸಂಜಯ್ ತಡೆಯೊಡ್ಡಿದರು.
ಮೂರನೇ ಕ್ವಾರ್ಟರ್‌ನಲ್ಲೂ ಎದುರಾಳಿ ಮೇಲೆ ಒತ್ತಡ ಹೇರುವುದನ್ನು ಮುಂದುವರಿಸಿದ ಭಾರತ, 42ನೇ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿ ಪಡೆಯಿತು. ಮರುನಿಮಿಷದಲ್ಲಿ ಹರ್ಮಾನ್‌ಪ್ರೀತ್ ಅದನ್ನು ಗೋಲಾಗಿ ಪರಿವರ್ತಿಸಿದರು. ಈ ಮೂಲಕ ಭಾರತದ ಮುನ್ನಡೆಯನ್ನು 3-0ಗೆ ಏರಿಸಿದರು.
ಬಳಿಕ ವೇಲ್ಸ್ 54ನೇ ನಿಮಿಷದಲ್ಲಿ ಪಂದ್ಯದ ಮೊದಲ ಪೆನಾಲ್ಟಿ ಕಾರ್ನರ್ ಪಡೆಯಿತು. ಆದರೆ ಅದನ್ನು ಗೋಲಾಗಿ ಪರಿವರ್ತಿಸಲು ಗೋಲು ಕೀಪರ್ ಮೋಹಿತ್ ಅಡ್ಡಿಯಾದರು. ಬೆನ್ನಲ್ಲೇ ಮತ್ತೊಂದು ಅವಕಾಶ ಪಡೆದ ವೇಲ್ಸ್, ಈ ಬಾರಿ ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. ಅಂಪೈರ್ ವಿಡಿಯೋ ರೆರಲ್ ಪರಿಶೀಲನೆಯ ಬಳಿಕ ಈ ಗೋಲು ಮಾನ್ಯಮಾಡಿದರು. ಕೇವಲ 2ನೇ ಬಾರಿ ವಿಶ್ವಕಪ್ ಆಡುತ್ತಿರುವ ವೇಲ್ಸ್ ತಂಡ ತೀವ್ರ ಪ್ರತಿರೋಧ ತೋರಿದರೂ, ಭಾರತ ಪೂರ್ಣ 3 ಅಂಕ ಗಳಿಸುವುದನ್ನು ತಡೆಯಲಾಗಲಿಲ್ಲ.

ಮಿಂಚಿದ ಕನ್ನಡಿಗ ಮೋಹಿತ್


ಗೋಲು ಕೀಪರ್ ಹಾಗೂ ಕನ್ನಡಿಗ ಎಚ್.ಎಸ್. ಮೋಹಿತ್ ವಿಶ್ವಕಪ್ ಪದಾರ್ಪಣೆಯ ಪಂದ್ಯದಲ್ಲಿ ತಡೆಗೋಡೆಯಾಗಿ ನಿಂತು ಗಮನಸೆಳೆದರು. ಪಂದ್ಯದ ಕೊನೇ ಹಂತದಲ್ಲಿ ವೇಲ್ಸ್‌ಗೆ ಒಂದು ಗೋಲು ಬಿಟ್ಟುಕೊಟ್ಟಿದ್ದು ಹೊರತುಪಡಿಸಿದರೆ, ಮೋಹಿತ್ ಪಂದ್ಯದುದ್ದಕ್ಕೂ ವೇಲ್ಸ್ ತಂಡದ ಎಲ್ಲ ಹೊಡೆತಗಳನ್ನೂ ತಡೆದು ಭಾರತದ ಗೆಲುವಿಗೆ ನೆರವಾದರು. ಕೋಚ್ ಕ್ರೇಗ್ ಫುಲ್ಟನ್ ಅನುಸರಿಸುತ್ತಿರುವ ಆವರ್ತನ ಪದ್ಧತಿಯ ಅನ್ವಯ ಪಂದ್ಯದ 16ನೇ ನಿಮಿಷದಲ್ಲಿ ಮೋಹಿತ್, ಮೊದಲ ಆದ್ಯತೆಯ ಗೋಲು ಕೀಪರ್ ಸೂರಜ್ ಕರ್ಕೆರಗೆ ಬದಲಾಗಿ ಮೈದಾನ ಪ್ರವೇಶಿಸಿದರು.

ಭಾರತಕ್ಕೆ ಮುಂದಿನ ಪಂದ್ಯ


ಯಾವಾಗ: ಸೋಮವಾರ
ಎದುರಾಳಿ: ಇಂಗ್ಲೆಂಡ್
ಆರಂಭ: ಸಂಜೆ 6.30