ಭಾರತ ಹಾಕಿ ತಂಡಕ್ಕೆ ಕೇಸರಿ ಬಣ್ಣದ ಹೊಸ ಜೆರ್ಸಿ; ವಿವಾದದ ಬಿಸಿ! ಮಾಜಿ ಆಟಗಾರರಿಂದ ವಿರೋಧ
ನವದೆಹಲಿ: ಮುಂಬರುವ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪುರುಷರ ಮತ್ತು ಮಹಿಳಾ ಹಾಕಿ ತಂಡಗಳು ಸಾಂಪ್ರದಾಯಿಕ ನೀಲಿ ಬಣ್ಣಕ್ಕೆ ಬದಲಾಗಿ ಕೇಸರಿ (saffron) ಬಣ್ಣದ ಹೊಸ ಜೆರ್ಸಿಯಲ್ಲಿ ಕಣಕ್ಕಿಳಿಯಲಿವೆ. ಹಾಕಿ ಇಂಡಿಯಾ ಗುರುವಾರ ಈ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದ ಬೆನ್ನಲ್ಲೇ, ಮಾಜಿ ಆಟಗಾರರಿಂದ ಟೀಕೆಗಳು ಕೇಳಿ ಬರುವುದರೊಂದಿಗೆ ಈ ನಡೆ ವಿವಾದದ ಕಿಡಿ ಹೊತ್ತಿಸಿದೆ. ಆದರೆ ಹಾಕಿ ಇಂಡಿಯಾ (Hockey India) ತಾಂತ್ರಿಕ ಕಾರಣವನ್ನು ನೀಡಿ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.
ಹಾಕಿ ಇಂಡಿಯಾ ಸಾಮಾಜಿಕ ಜಾಲತಾಣದಲ್ಲಿ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದ್ದು, ಆಟಗಾರರು ಮತ್ತು ತರಬೇತಿ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿ ಈ ಹೊಸ ಜೆರ್ಸಿಯನ್ನು ಅಂತಿಮಗೊಳಿಸಲಾಗಿದೆ ಎಂದಿದೆ. ಜತೆಗೆ ಕೇಸರಿ ಧೈರ್ಯ, ತ್ಯಾಗ ಮತ್ತು ವಿಜಯದ ಸಂಕೇತವಾಗಿದ್ದು, ರಾಷ್ಟ್ರಧ್ವಜದಲ್ಲೂ ಇರುವ ಬಣ್ಣವಾಗಿದೆ. ಈ ನಿರ್ಧಾರದ ಹಿಂದೆ ಯಾವುದೇ ಬಾಹ್ಯ ಒತ್ತಡವಿಲ್ಲ ಎಂದು ಸ್ಪಷ್ಟಪಡಿಸಿದೆ.
ಭಾರತ ಹಾಕಿ ತಂಡದ ಮಾಜಿ ನಾಯಕ ಹಾಗೂ ಕ್ರೀಡಾ ವಿಶ್ಲೇಷಕ ವಿರೇನ್ ರಸ್ಕಿನ್ಹಾ ಮೊದಲಿಗರಾಗಿ ಕೇಸರಿ ಬಣ್ಣಕ್ಕೆ ಆಕ್ಷೇಪ ಎತ್ತಿದ್ದು, ನೀಲಿ ಯಾವಾಗಲೂ ಭಾರತ ಹಾಕಿ ತಂಡದ ಪರಂಪರೆ ಮತ್ತು ಗುರುತು ಆಗಿದೆ. ನಾನೂ ನೀಲಿ ಬಣ್ಣದ ಜೆರ್ಸಿಯನ್ನು ಹೆಮ್ಮೆಯಿಂದ ಧರಿಸಿದ್ದೆ. ಅಭಿಮಾನಿಗಳೂ ಭಾರತ ತಂಡವನ್ನು ನೀಲಿ ಜೆರ್ಸಿಯಲ್ಲಿ ನೋಡಲು ಬಯಸುತ್ತಾರೆ' ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಮತ್ತೋರ್ವ ಮಾಜಿ ನಾಯಕ ವಿ. ಭಾಸ್ಕರನ್ ಕೂಡ ಬಣ್ಣ ಬದಲಾವಣೆಯನ್ನು ವಿರೋಧಿಸಿದ್ದು, ತಾಂತ್ರಿಕ ಕಾರಣದ ಬದಲು, ಈ ಬದಲಾವಣೆಗೆ ನಿಜವಾದ ಕಾರಣವೇನೆಂದು ತಿಳಿಸಬೇಕೆಂದು ಹೇಳಿದ್ದಾರೆ. ಮಾಜಿ ನಾಯಕರಾದ ಪರ್ಗತ್ ಸಿಂಗ್, ಧನ್ರಾಜ್ ಪಿಳ್ಳೆ ೃ ಕೂಡ ದಶಕಗಳ ಕಾಲ ಭಾರತದ ಗುರುತಾಗಿದ್ದ ನೀಲಿ ಬಣ್ಣವನ್ನು ಬದಲಾಯಿಸಿರುವುದನ್ನು ಪ್ರಶ್ನಿಸಿದ್ದಾರೆ.
1928ರಿಂದಲೂ ನಾವು ನೀಲಿ ಜೆರ್ಸಿ ಧರಿಸುತ್ತಿದ್ದೆವು. ನಾನು ಬಾಲಕನಾಗಿದ್ದಾಗ ಭಾರತ ಪರ ನೀಲಿ ಜೆರ್ಸಿಯಲ್ಲಿ ಆಡುವ ಕನಸು ಕಂಡಿದ್ದೆ. ಆದರೆ ಈಗ ಬಣ್ಣ ಬದಲಾವಣೆಯ ನಿರ್ಧಾರವನ್ನು ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ ಎಂದು 1975ರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಅಜಿತ್ ಪಾಲ್ ಸಿಂಗ್ ಹೇಳಿದ್ದಾರೆ.
ಪುರುಷ&ಮಹಿಳಾ ಹಾಕಿ ವಿಶ್ವಕಪ್ ಆಗಸ್ಟ್ 15ರಿಂದ 30ರವರೆಗೆ ನೆದರ್ಲ್ಯಾಂಡ್ಸ್&ಬೆಲ್ಜಿಯಂನಲ್ಲಿ ಏಕಕಾಲದಲ್ಲಿ ನಡೆಯಲಿದೆ. ಕೇಸರಿ ಸೇರ್ಪಡೆಯ ಜತೆಗೆ, ಈಗಾಗಲೆ ಇದ್ದ ಭಾರತ ಹಾಕಿ ತಂಡದ ಬಿಳಿ ಬಣ್ಣದ ಜೆರ್ಸಿ ಮುಂದುವರಿಯಲಿದೆ.
ಭಾರತ ತಂಡದ ಹೊಸ ಜೆರ್ಸಿಯು ದೇಶದ ಸಾಂಸತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ "ಮಂಡಲ'ವನ್ನು ಒಳಗೊಂಡಿದೆ. ಅಶೋಕ ಚಕ್ರದಿಂದ ಪ್ರೇರಣೆ ಪಡೆದು ನೇವಿ ಬ್ಲೂ ಬಣ್ಣದ ಉಚ್ಚರಣೆಯು ಪ್ರಗತಿ, ಶಾಂತಿ ಮತ್ತು ಏಕಾಗ್ರತೆಯ ಸಂಕೇತವಾಗಿದೆ. ಸುದರ್ಶನ ಚಕ್ರದಿಂದ ಪ್ರೇರಣೆ ಪಡೆದು ಜೆರ್ಸಿಯ ಹೃದಯ ಭಾಗದಲ್ಲಿ ಗ್ರಾಫಿಕ್ ಚಿತ್ರಿಸಲಾಗಿದೆ. ದೇವನಗರಿಯ ಲಿಪಿಯಿಂದ ಸ್ಫೂರ್ತಿ ಪಡೆದು "ಇಂಡಿಯಾ' ಎಂದು ಜೆರ್ಸಿಯ ಎದುರು ಭಾಗದಲ್ಲಿ ಬರೆಯಲಾಗಿದೆ.
ಈಗ ಅಂತಾರಾಷ್ಟ್ರೀಯ ಹಾಕಿ ಮೈದಾನದ ಬಣ್ಣ ನೀಲಿಯಾಗಿದೆ. ಇದರಿಂದ ಆಟಗಾರರ ಸಮವಸ್ತ್ರದ ಬಣ್ಣವು ಸಿಂಥೆಟಿಕ್ ರ್ಟ್ ಮೇಲ್ಮೆಯೊಂದಿಗೆ ಬೆರೆತು, ಸ್ಪಷ್ಟತೆ ಮತ್ತು ಗೋಚರತೆಯ ಮೇಲೆ ಪರಿಣಾಮ ಬೀರುತಿತ್ತು. ಹೀಗಾಗಿ ತರಬೇತುದಾರರು ಹಳದಿ ಅಥವಾ ಕೇಸರಿ ಬಣ್ಣವನ್ನು ಸೂಚಿಸಿದ್ದರು. ಎಚ್ಚರಿಕೆಯಿಂದ ಪರಿಗಣಿಸಿದ ಬಳಿಕ ನಾವು ಈ ಬಣ್ಣವನ್ನು ಅಂತಿಮಗೊಳಿಸಿದ್ದೇವೆ ಎಂದು ಹಾಕಿ ಇಂಡಿಯಾ, ಮಾಜಿ ಆಟಗಾರರ ಟೀಕೆಗಳಿಗೆ ಪ್ರತಿಯಾಗಿ ಸಮರ್ಥನೆ ನೀಡಿದೆ. ಅಲ್ಲದೆ ಬಣ್ಣ ಬದಲಾವಣೆ ಹೊಸದಲ್ಲ, 2014ರ ಹಾಕಿ ವಿಶ್ವಕಪ್ನಲ್ಲಿ ಹಳದಿ ಜೆರ್ಸಿಯಲ್ಲಿ ಆಡಲಾಗಿತ್ತು ಎಂದೂ ತಿಳಿಸಿದೆ.
ನಾಯಕ ಹರ್ಮಾನ್ಪ್ರೀತ್ ಕೂಡ ಸಮರ್ಥನೆ
ಹೊಸ ಜೆರ್ಸಿಯ ಬಣ್ಣವನ್ನು ಭಾರತ ಪುರುಷರ ಹಾಕಿ ತಂಡದ ನಾಯಕ ಹರ್ಮಾನ್ಪ್ರೀತ್ ಸಿಂಗ್ ಕೂಡ ಸಮರ್ಥಿಸಿದ್ದು, "ಜೆರ್ಸಿ ಬಣ್ಣ ಬದಲಾವಣೆಯು ತಂಡ ಮತ್ತು ಕೋಚ್ಗಳ ಸಂಘಟಿತ ನಿರ್ಧಾರವಾಗಿದೆ. ಈ ಬದಲಾವಣೆ ಅಗತ್ಯವಾಗಿತ್ತು. ನಾವು ಹೊಸ ಜೆರ್ಸಿಯಲ್ಲಿ ಆಡಿದಾಗ ಉತ್ತಮ ಹೊಂದಾಣಿಕೆಯನ್ನು ಕಂಡಿದ್ದೇವೆ. ಇದು ಸಹ&ಆಟಗಾರರನ್ನು ಗುರುತಿಸುವುದನ್ನು ಸುಲಭಗೊಳಿಸಿದೆ. ಈ ಬಗ್ಗೆ ಯಾವುದೇ ವಿವಾದ ಬೇಕಿಲ್ಲ' ಎಂದು ಹೇಳಿದ್ದಾರೆ.