ಜೂನಿಯರ್ ಹಾಕಿ ವಿಶ್ವಕಪ್ನಲ್ಲಿ ಗೋಲಿನ ಸುರಿಮಳೆ ಹರಿಸಿದ ಭಾರತ
ಚೆನ್ನೈ: ಆತಿಥೇಯ ಭಾರತ ತಂಡ ಜೂನಿಯರ್ ಪುರುಷರ ಹಾಕಿ ವಿಶ್ವಕಪ್ (FIH Men''s Junior World Cup ) ಟೂರ್ನಿಯಲ್ಲಿ ಭರ್ಜರಿ ನಿರ್ವಹಣೆ ಮುಂದುವರಿಸಿದ್ದು, ಸತತ 2ನೇ ಗೆಲುವಿನ ಸಂಭ್ರಮ ಕಂಡಿದೆ. ಭಾರತ ತಂಡ ಶನಿವಾರ ನಡೆದ ತನ್ನ 2ನೇ ಲೀಗ್ ಪಂದ್ಯದಲ್ಲಿ ಓಮನ್ ವಿರುದ್ಧ 17-0 ಗೋಲುಗಳಿಂದ ಗೆಲುವು ದಾಖಲಿಸಿತು.
ಮೇಯರ್ ರಾಧಾಕೃಷ್ಣನ್ ಹಾಕಿ ಸ್ಟೇಡಿಯಂನಲ್ಲಿ ನಡೆದ ಕಾದಾಟದಲ್ಲಿ ಭಾರತ ತಂಡ ಮೊದಲಾರ್ಧದಲ್ಲೇ 5-0 ಮುನ್ನಡೆ ಸಾಧಿಸಿತು. ಭಾರತ ಪರ ಮನ್ಮೀತ್ ಸಿಂಗ್ (17, 26, 36ನೇ ನಿಮಿಷ), ಅರ್ಷದೀಪ್ ಸಿಂಗ್ (4, 33, 40), ದಿಲ್ರಾಜ್ ಸಿಂಗ್ (29, 32, 58) ತಲಾ 3 ಗೋಲು ಸಿಡಿಸಿದರೆ, ಅಜೀತ್ ಯಾದವ್ (34, 47), ಲುವಾನ್ (43, 50), ಗುರ್ಜೋತ್ ಸಿಂಗ್ (39, 45) ತಲಾ 2 ಗೋಲು ಗಳಿಸಿದರು. ಅನ್ಮೋಲ್ ಎಕ್ಕ (29), ಶಾರ್ದಾನಂದ್ ತಿವಾರಿ (55) ತಲಾ ಒಂದು ಗೋಲು ಬಾರಿಸಿದರು.
ಭಾರತ ತನ್ನ 3ನೇ ಹಾಗೂ ಕೊನೇ ಲೀಗ್ ಪಂದ್ಯದಲ್ಲಿ ಮಂಗಳವಾರ ಸ್ವಿರ್ಜಲೆಂಡ್ ತಂಡವನ್ನು ಎದುರಿಸಲಿದೆ.