ದಾಖಲೆಯ ನಾಲ್ಕನೇ ಬಾರಿ ಹಾಕಿ ವಿಶ್ವಕಪ್ ಗೆದ್ದ ಜರ್ಮನಿ
ವಾವ್ರೆ (ಬೆಲ್ಜಿಯಂ): ಜರ್ಮನಿ ತಂಡ ಸತತ 2ನೇ ಮತ್ತು ಒಟ್ಟಾರೆ ನಾಲ್ಕನೇ ಬಾರಿ ಎಫ್ಐಎಚ್ ಪುರುಷರ ಹಾಕಿ ವಿಶ್ವಕಪ್ನಲ್ಲಿ (
FIH Men''s Hockey World Cup
) ಚಾಂಪಿಯನ್ ಪಟ್ಟಕ್ಕೇರಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಜರ್ಮನಿ ತಂಡ ಸ್ಪೇನ್ ಎದುರು 1-0 ಗೋಲಿನ ಅಂತರದಿಂದ ಗೆದ್ದಿತು. ಈ ಮೂಲಕ ಜರ್ಮನಿ, ಗರಿಷ್ಠ 4 ಬಾರಿ ಹಾಕಿ ವಿಶ್ವಕಪ್ ಗೆದ್ದ ಪಾಕಿಸ್ತಾನದ ಸಾಧನೆಯನ್ನು ಸರಿಗಟ್ಟಿತು.
ಬೆಲ್ಫಿಯುಸ್ ಹಾಕಿ ಅರೇನಾದಲ್ಲಿ ನಡೆದ ಫೈನಲ್ ಪಂದ್ಯದ ಮೊದಲಾರ್ಧ ಗೋಲುರಹಿತವಾಗಿತ್ತು. ಬಳಿಕ 3ನೇ ಕ್ವಾರ್ಟರ್ನಲ್ಲಿ ಜರ್ಮನಿ ಪರ ಮೈಕೆಲ್ ಸ್ಟ್ರುಥಾಫ್ ಗೋಲು ಬಾರಿಸಿ ಗೆಲುವಿನ ರೂವಾರಿ ಎನಿಸಿದರು. ಜರ್ಮನಿ ಈ ಮುನ್ನ 2002, 2006 ಮತ್ತು 2023ರಲ್ಲಿ ವಿಶ್ವಕಪ್ ಜಯಿಸಿತ್ತು. 28 ವರ್ಷಗಳ ಬಳಿಕ ಫೈನಲ್ಗೇರಿದ್ದ ಸ್ಪೇನ್ 3ನೇ ಬಾರಿಯೂ ಪ್ರಶಸ್ತಿ ವಂಚಿತವಾಯಿತು. ಈ ಮುನ್ನ 1971 ಮತ್ತು 1998ರಲ್ಲೂ ಸ್ಪೇನ್ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
ಇದಕ್ಕೆ ಮುನ್ನ ನಡೆದ ಪಂದ್ಯದಲ್ಲಿ ಸಹ-ಆತಿಥೇಯ ನೆದರ್ಲ್ಯಾಂಡ್ಸ್ಗೆ 2-1ರಿಂದ ಸೋಲುಣಿಸಿದ ಅರ್ಜೆಂಟೀನಾ ತಂಡ ಕಂಚಿನ ಪದಕ ಗೆದ್ದುಕೊಂಡಿತು.