ಭಾರತ ಮಹಿಳಾ ತಂಡಕ್ಕೆ ಹಾಕಿ ವಿಶ್ವಕಪ್ ಟಿಕೆಟ್; ಅರ್ಹತಾ ಟೂರ್ನಿಯಲ್ಲಿ ಫೈನಲ್ ಪ್ರವೇಶ
ಹೈದರಾಬಾದ್: ಆತಿಥೇಯ ಭಾರತ ತಂಡ ಮುಂಬರುವ ಎಫ್ಐಎಚ್ ಮಹಿಳಾ ಹಾಕಿ ವಿಶ್ವಕಪ್ (hockey world cup) ಟೂರ್ನಿಗೆ ಅಧಿಕೃತವಾಗಿ ಅರ್ಹತೆ ಪಡೆದುಕೊಂಡಿದೆ. ಶುಕ್ರವಾರ ನಡೆದ ಮಹಿಳಾ ಹಾಕಿ ವಿಶ್ವಕಪ್ ಕ್ವಾಲಿಫೈಯರ್ಸ್ ಟೂರ್ನಿಯ (FIH Women''''s WC Qualifiers) ಸೆಮಿಫೈನಲ್ನಲ್ಲಿ ಇಟಲಿ ವಿರುದ್ಧ 1-0 ಗೋಲಿನ ಅಂತರದಿಂದ ಗೆದ್ದ ಸಲೀಮಾ ಟೆಟೆ ಪಡೆ ಫೈನಲ್ಗೇರುವ ಮೂಲಕ ಈ ಸಾಧನೆ ಮಾಡಿತು. ಉಪಾಂತ್ಯಕ್ಕೆ ಮುನ್ನ ರ್ಯಾಂಕಿಂಗ್ ಆಧಾರದಲ್ಲಿ ಭಾರತ ವಿಶ್ವಕಪ್ ಪಡೆದರೂ, ಸೆಮೀಸ್ ಗೆಲುವು ಇದನ್ನು ಖಾತ್ರಿಪಡಿಸಿತು. ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ತಂಡ ಸ್ವರ್ಣ ಪದಕಕ್ಕಾಗಿ ಇಂಗ್ಲೆಂಡ್ ವಿರುದ್ಧ ಕಾದಾಟ ನಡೆಸಲಿದೆ.
ಸೆಮಿಫೈನಲ್ ಪಂದ್ಯದ ಮೊದಲಾರ್ಧ ಗೋಲು ರಹಿತವಾಗಿ ಸಾಗಿತು. ಬಳಿಕ ಭಾರತ ಪರ ಪಂದ್ಯದ 40ನೇ ನಿಮಿಷದಲ್ಲಿ ಮನೀಷಾ ಚೌಹಾಣ್ ಏಕೈಕ ಗೋಲು ದಾಖಲಿಸಿ ಗೆಲುವಿನ ರೂವಾರಿ ಎನಿಸಿದರು.
ಇನ್ನೊಂದು ಸೆಮೀಸ್ನಲ್ಲಿ ಇಂಗ್ಲೆಂಡ್ ತಂಡ 2&0 ಅಂತರದಿಂದ ಸ್ಕಾಟ್ಲೆಂಟ್ ವಿರುದ್ಧ ಗೆದ್ದು ಬೀಗಿತು. ಅರ್ಹತಾ ಟೂರ್ನಿಯ ಅಗ್ರ ಮೂರು ತಂಡಗಳು ಆಗಸ್ಟ್ 15ರಿಂದ 30ರವರೆಗೆ ನೆದರ್ಲೆಂಡ್ ಮತ್ತು ಬೆಲ್ಜಿಯಂ ಜಂಟಿ ಆತಿಥ್ಯದಲ್ಲಿ ನಿಗದಿಯಾಗಿರುವ ವಿಶ್ವಕಪ್ ಟೂರ್ನಿಗೆ ಟಿಕೆಟ್ ಗಿಟ್ಟಿಸಿಕೊಳ್ಳಲಿವೆ. ಸ್ಕಾಟ್ಲೆಂಡ್-ಇಟಲಿ ತಂಡಗಳು ಶನಿವಾರ ಮೂರನೇ ಸ್ಥಾನಕ್ಕಾಗಿ ಹೋರಾಡಲಿವೆ.
ನೇರಪ್ರಸಾರ: ಜಿಯೋ ಹಾಟ್ಸ್ಟಾರ್, ಸ್ಟಾರ್ ಸ್ಪೋರ್ಟ್ಸ್ ಖೇಲ್.