ಎಫ್​ಐಎಚ್ ಪ್ರೊ ಲೀಗ್: ಪಾಕ್​ಗೆ ಮತ್ತೆ ಸೋಲುಣಿಸಿದ ಭಾರತ 
ಹಾಕಿ

ಎಫ್​ಐಎಚ್ ಪ್ರೊ ಲೀಗ್: ಪಾಕ್​ಗೆ ಮತ್ತೆ ಸೋಲುಣಿಸಿದ ಭಾರತ

ಲಂಡನ್: ಗೋಲುಗಳ ಮಳೆ ಸುರಿಸಿದ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ತನ್ನ ಅಜೇಯ ಓಟವನ್ನು ಮುಂದುವರಿಸಿದೆ. ಹರ್ಮಾನ್‌ಪ್ರೀತ್ ಸಿಂಗ್ ಬಳಗ ಶುಕ್ರವಾರ ನಡೆದ ಪಂದ್ಯದಲ್ಲಿ 7-1 ಅಂತರದಿಂದ ಗೆದ್ದು ಬೀಗಿತು. ಇದರೊಂದಿಗೆ ಭಾರತ ಎಫ್​ಐಎಚ್ ಪ್ರೊ ಲೀಗ್ ಪುರುಷರ ಹಾಕಿ ಟೂರ್ನಿಯ ಲಂಡನ್ ಚರಣದಲ್ಲಿ ಪಾಕ್ ಎದುರು ಎರಡು ಪಂದ್ಯ ಜಯಿಸಿದ ಸಾಧನೆ ಮಾಡಿತು. ಇದಕ್ಕೆ ಮುನ್ನ ಜೂನ್ 23ರಂದು ಉಭಯ ತಂಡಗಳ ಮೊದಲ ಮುಖಾಮುಖಿಯಲ್ಲಿ ಭಾರತ 4-3 ರಿಂದ ಪಾಕ್ ತಂಡವನ್ನು ಮಣಿಸಿತ್ತು.
ಭಾರತ ತಂಡ 2016ರಲ್ಲಿ ಕೊನೆಯದಾಗಿ ಪಾಕ್ ವಿರುದ್ಧ ಸೋಲು ಕಂಡಿತ್ತು. ನಂತರ ಇದುವರೆಗೆ ಆಡಿರುವ 18 ಪಂದ್ಯಗಳಲ್ಲಿ 16ರಲ್ಲಿ ಗೆದ್ದು, 2ರಲ್ಲಿಡ್ರಾ ಸಾಧಿಸಿದೆ. ಪಂದ್ಯದ 10ನೇ ನಿಮಿಷದಲ್ಲಿ ಮೊಹಮದ್ ಅಬು ಪಾಕ್‌ಗೆ ಮುನ್ನಡೆ ಒದಗಿಸಿದರು. ಮೊದಲ ಕ್ವಾರ್ಟರ್‌ನಲ್ಲಿ 3 ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲುಗಳಿಸಲು ಭಾರತ ಎಡವಿತು. ನಂತರ 20ನೇ ನಿಮಿಷದಲ್ಲಿ ಸುಖ್‌ಜೀತ್ ಸಿಂಗ್ ಭಾರತ ಪರ ಮೊದಲ ಗೋಲು ದಾಖಲಿಸಿ ಪಂದ್ಯ ಸಮಬಲಗೊಳಿಸಿದರು.
ಹರ್ಮಾನ್‌ಪ್ರೀತ್ ಸಿಂಗ್ (26) ಗೋಲಿನೊಂದಿಗೆ ಮೊದಲಾರ್ಧದ ಮುಕ್ತಾಯಕ್ಕೆ ಭಾರತ 2-1ರ ಮುನ್ನಡೆ ಕಂಡಿತು. ವಿರಾಮದ ನಂತರ ದೊರೆತ ಎರಡು ಪೆನಾಲ್ಟಿ ಸ್ಟ್ರೋಕ್‌ನಲ್ಲಿ ಹಾರ್ದಿಕ್ ಸಿಂಗ್ (34), ಜುಗ್ರಾಜ್ ಸಿಂಗ್ (35) ತಲಾ ಗೋಲು ಸಿಡಿಸಿ ಮುನ್ನಡೆ ಹಿಗ್ಗಿಸಿದರೆ, ಅಭಿಷೇಕ್ (41), ರಾಜ್‌ಕುಮಾರ್ ಪಾಲ್ (44), ದಿಲ್‌ಪ್ರೀತ್ ಸಿಂಗ್ (54) ಭಾರತ ಪರ ಪಂದ್ಯದ ಗೋಲುಗಳಿಸಿ ಗೆಲುವಿನ ಅಂತರ ಹೆಚ್ಚಿಸಿದರು.
ಶೂಟೌಟ್‌ನಲ್ಲಿ ನಿರಾಸೆ: ಪಾಕ್ ವಿರುದ್ಧದ ಪಂದ್ಯಕ್ಕೆ ಮುನ್ನ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತ ತಂಡ,ಆತಿಥೇಯ ಇಂಗ್ಲೆಂಡ್ ಎದುರು ಪೆನಾಲ್ಟಿ ಶೂಟೌಟ್‌ನಲ್ಲಿ 1-4 ಅಂತರದಿಂದ ಪರಾಭವಗೊಂಡಿತ್ತು. ನಿಗದಿತ ಸಮಯದಲ್ಲಿ 2-2 ಗೋಲುಗಳಿಂದ ಪಂದ್ಯ ಸಮಬಲಗೊಂಡಿತ್ತು. ಭಾರತ ಪರ ದಿಲ್‌ಪ್ರೀತ್ ಸಿಂಗ್ (10, 58ನೇ ನಿಮಿಷ) ಅವಳಿ ಗೋಲು ಸಿಡಿಸಿದರೆ, ಇಂಗ್ಲೆಂಡ್ ಪರ ಡೇವಿಡ್ ಗುಡ್‌ಫೀಲ್ಡ್ (29) ಮತ್ತು ನಿಕೊಲಸ್ ಬಂಡುರಕ್ (56) ತಲಾ ಗೋಲುಗಳಿಸಿದರು. ಶೂಟೌಟ್‌ನಲ್ಲಿ ಹರ್ಮಾನ್‌ಪ್ರೀತ್ ಸಿಂಗ್ ಏಕೈಕ ಗೋಲು ದಾಖಲಿಸಿದ್ದರು.