ಜೂನಿಯರ್ ಪುರುಷರ ಹಾಕಿ ವಿಶ್ವಕಪ್: ಕ್ವಾರ್ಟರ್ಫೈನಲ್ಗೇರಿದ ಭಾರತ
ಮಧುರೈ: ಆತಿಥೇಯ ಭಾರತ ತಂಡ ಗೋಲುಗಳ ಅಬ್ಬರವನ್ನು ಮುಂದುವರಿಸುವ ಮೂಲಕ ಜೂನಿಯರ್ ಪುರುಷರ ಹಾಕಿ ವಿಶ್ವಕಪ್ (FIH Men''''s World Cup) ಟೂರ್ನಿಯಲ್ಲಿ ಅಜೇಯವಾಗಿ ಕ್ವಾರ್ಟರ್ಫೈನಲ್ ಪ್ರವೇಶಿಸಿದೆ. ಭಾರತ ತಂಡ ಮಂಗಳವಾರ ನಡೆದ ತನ್ನ 3ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಸ್ವಿರ್ಜಲೆಂಡ್ ವಿರುದ್ಧ 5-0 ಗೋಲುಗಳಿಂದ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ರೋಹಿತ್ ಯಾದವ್ ಪಡೆ ತಂಡ ಬಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿತು.
ಮಧುರೈ ಅಂತಾರಾಷ್ಟ್ರೀಯ ಹಾಕಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ, ಮಾಜಿ ಗೋಲು ಕೀಪರ್ ಪಿಆರ್ ಶ್ರೀಜೇಶ್ ತರಬೇತಿಯ ಭಾರತ ತಂಡ ಮೊದಲಾರ್ಧದಲ್ಲೇ 4-0 ಅಂತರದಿಂದ ಮುನ್ನಡೆ ಸಾಧಿಸಿತು. ಮನ್ಮೀತ್ ಸಿಂಗ್ (2 ಮತ್ತು 11ನೇ ನಿಮಿಷ) 9 ನಿಮಿಷಗಳ ಅಂತರದಲ್ಲಿ 2 ಗೋಲು ಬಾರಿಸಿ ಭಾರತಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು. ಬಳಿಕ ಶಾರ್ದಾನಂದ ತಿವಾರಿ (13, 54) ಎರಡು ಮತ್ತು ಅರ್ಷದೀಪ್ ಸಿಂಗ್ (28) ಒಂದು ಗೋಲು ಬಾರಿಸಿ ಮುನ್ನಡೆಯನ್ನು ಹಿಗ್ಗಿಸಿದರು. ಭಾರತ ತಂಡ ಮೊದಲೆರಡು ಪಂದ್ಯಗಳಲ್ಲಿ ಚಿಲಿ (7-0) ಮತ್ತು ಓಮನ್ (17-0) ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು.
ಡಿಸೆಂಬರ್ 5ರಂದು ಕ್ವಾರ್ಟರ್ಫೈನಲ್ ಪಂದ್ಯಗಳು ನಡೆಯಲಿದ್ದು, ಭಾರತ ತಂಡ ಡಿ ಗುಂಪಿನ ದ್ವೀತಿಯ ಸ್ಥಾನಿ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.