ಮಹಿಳಾ ಹಾಕಿ ವಿಶ್ವಕಪ್ ಕ್ವಾಲಿಫೈಯರ್: ಭಾರತ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿ
ಹೈದರಾಬಾದ್: ಆತಿಥೇಯ ಭಾರತ ತಂಡ ಎಫ್ಐಎಚ್ ಮಹಿಳಾ ಹಾಕಿ ವಿಶ್ವಕಪ್ ಕ್ವಾಲಿಫೈಯರ್ಸ್ (FIH Women''s Hockey WC Qualifiers) ಟೂರ್ನಿಯಲ್ಲಿ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ 0-2 ಗೋಲುಗಳ ಅಂತರದಿಂದ ಇಂಗ್ಲೆಂಡ್ ವಿರುದ್ಧ ಪರಾಭವಗೊಂಡಿತು.
ಟೂರ್ನಿಯಲ್ಲಿ ಸತತ 5 ಗೆಲುವಿನೊಂದಿಗೆ ಅಜೇಯ ಓಟ ಕಾಯ್ದುಕೊಂಡ ಇಂಗ್ಲೆಂಡ್ ಸ್ವರ್ಣ ಪದಕಕ್ಕೆ ಕೊರಳೊಡ್ಡಿತು. ಇದಕ್ಕೆ ಮುನ್ನ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಇಟಲಿ ಎದುರು 0-1 ಗೋಲುಗಳ ಅಂತರದಿಂದ ಗೆದ್ದ ಸ್ಕಾಟ್ಲೆಂಡ್ ತಂಡ, ಟೂರ್ನಿಯ ಮೂರನೇ ತಂಡವಾಗಿ ಮುಂಬರುವ ಮಹಿಳಾ ಹಾಕಿ ವಿಶ್ವಕಪ್ ಟೂರ್ನಿಗೆ ಅರ್ಹತೆ ಖಾತ್ರಿಪಡಿಸಿಕೊಂಡಿತು. ಭಾರತ ಮತ್ತು ಇಂಗ್ಲೆಂಡ್ ಈಗಾಗಲೆ ಮೊದಲೆರಡು ತಂಡಗಳಾಗಿ ಅರ್ಹಗೆ ಗಿಟ್ಟಿಸಿಕೊಂಡಿದ್ದವು.
ಫೈನಲ್ ಪಂದ್ಯದ ಆರಂಭದಲ್ಲಿ ಪೆನಾಲ್ಟಿ ಕಾರ್ನರ್ ಕೈಚೆಲ್ಲಿದ ಭಾರತ ಮುನ್ನಡೆ ಸಾಧಿಸುವ ಅವಕಾಶ ಬಿಟ್ಟುಕೊಟ್ಟಿತು. ಉತ್ತಮ ಫಾರ್ಮ್ನಲ್ಲಿರುವ ಗ್ರೇಸ್ ಬಾಲ್ಡನ್ 13ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ನಲ್ಲಿ ಗೋಲು ಸಿಡಿಸಿ ಇಂಗ್ಲೆಂಡ್ಗೆ ಮೇಲುಗೈ ಒದಗಿಸಿದರು. ಈ ಪಂದ್ಯಕ್ಕೂ ಮುನ್ನವೇ ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿದ್ದ ಭಾರತ ತಂಡ ಪೆನಾಲ್ಟಿ ಕಾರ್ನರ್ಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಎಡವಿತು. 43ನೇ ನಿಮಿಷದಲ್ಲಿ ಇಂಗ್ಲೆಂಡ್ನ ಮುನ್ನಡೆ ದ್ವಿಗುಣಗೊಳಿಸಿದ ಎಲಿಜಬೆತ್ ನೀಲ್ ಭಾರತದ ಸೋಲಿನ ಅಂತರ ಹಿಗ್ಗಿಸಿದರು.