ಭಾರತಕ್ಕೆ ಯೂತ್ ಹಾಕಿ ಫೈವ್ಸ್ ಏಷ್ಯನ್ ಕಿರೀಟ; ಮಹಿಳೆಯರಿಗೆ ಬೆಳ್ಳಿ ಪದಕ
ಮಸ್ಕತ್: ಭಾರತದ ಸಬ್ ಜೂನಿಯರ್ ಪುರುಷರ ತಂಡ ಎಫ್ಐಎಚ್ ಯೂತ್ ಹಾಕಿ ಫೈವ್ಸ್ ಏಷ್ಯನ್ ಚಾಂಪಿಯನ್ಷಿಪ್ನಲ್ಲಿ (Asian Youth Hockey 5s) ಪ್ರಶಸ್ತಿ ಗೆದ್ದುಕೊಂಡಿದೆ. ಶನಿವಾರ ರಾತ್ರಿ ನಡೆದ ಫೈನಲ್ನಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 3-1 ಗೋಲುಗಳಿಂದ ಗೆಲುವು ದಾಖಲಿಸಿತು. ಇದಕ್ಕೆ ಮುನ್ನ ಫೈನಲ್ಗೇರಿದಾಗಲೇ ಭಾರತ ಚೊಚ್ಚಲ ಆವೃತ್ತಿಯ ಎಫ್ಐಎಚ್ ಯೂತ್ ಹಾಕಿ ಫೈವ್ಸ್ ವಿಶ್ವಕಪ್ಗೆ ಅರ್ಹತೆ ಸಂಪಾದಿಸಿತ್ತು.
ಭಾರತ ಪರ ರೋಮಿತ್ ಪಾಲ್ (5ನೇ ನಿಮಿಷ), ನಾಯಕ ಕೇತನ್ ಕುಶ್ವಾಹ (12) ಮತ್ತು ಶಾರುಖ್ ಅಲಿ (13) ಗೋಲು ಬಾರಿಸಿ ಏಷ್ಯನ್ ಚಾಂಪಿಯನ್ ಪಟ್ಟವೇರಲು ನೆರವಾದರು. ಪಾಕ್ ಪರ ಮೊಹಮದ್ ಉಸ್ಮಾನ್ (16) ಏಕೈಕ ಗೋಲು ಬಾರಿಸಿ ಸೋಲಿನ ಅಂತರ ತಗ್ಗಿಸಿದರು.
ಮಹಿಳೆಯರು ರನ್ನರ್ಅಪ್: ಮಹಿಳಾ ವಿಭಾಗದ ಫೈನಲ್ನಲ್ಲಿ ಭಾರತ ತಂಡ ಚೀನಾ ವಿರುದ್ಧ 2-4ರಿಂದ ಪರಾಭವಗೊಂಡು ರನ್ನರ್ಅಪ್ ಸ್ಥಾನಕ್ಕೆ ಸಮಾಧಾನ ಕಂಡಿತು. ಭಾರತ ಪರ ನೌಶೀನ್ ನಾಜ್ (13) ಮತ್ತು ಪುಷ್ಪಾ ಮಾಂಝಿ (20) ಗೋಲು ಬಾರಿಸಿದರು. ಮಹಿಳಾ ವಿಭಾಗದಲ್ಲೂ ಭಾರತ ಫೈನಲ್ಗೇರಿದಾಗಲೇ ಹಾಕಿ ಫೈವ್ಸ್ ವಿಶ್ವಕಪ್ ಅರ್ಹತೆ ಒಲಿದಿತ್ತು. ಸೆಮೀಸ್ನಲ್ಲಿ ಭಾರತ ತಂಡ ಕಜಾಕ್ಸ್ತಾನ ವಿರುದ್ಧ 8-1ರಿಂದ ಗೆಲುವು ದಾಖಲಿಸಿತ್ತು.
ಹಾಕಿ ಫೈವ್ಸ್ ಪ್ರಶಸ್ತಿ ಗೆದ್ದ ಭಾರತದ ಪುರುಷರ ತಂಡ ಮತ್ತು ರನ್ನರ್ಅಪ್ ಮಹಿಳಾ ತಂಡಗಳಿಗೆ ಹಾಕಿ ಇಂಡಿಯಾ ಬಹುಮಾನ ಪ್ರಕಟಿಸಿದೆ. ಪುರುಷರ ತಂಡದ ಎಲ್ಲ ಆಟಗಾರರಿಗೆ ತಲಾ 2 ಲಕ್ಷ ರೂ. ಮತ್ತು ತರಬೇತಿ ಸಿಬ್ಬಂದಿಗೆ ತಲಾ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ. ಮಹಿಳಾ ತಂಡದ ಪ್ರತಿ ಆಟಗಾರ್ತಿಗೆ 1 ಲಕ್ಷ ರೂ. ಮತ್ತು ತರಬೇತಿ ಸಿಬ್ಬಂದಿಗೆ ತಲಾ 50 ಸಾವಿರ ರೂ. ನೀಡಲಾಗುತ್ತದೆ.