ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಜಪಾನ್ ಮಣಿಸಿ ಹ್ಯಾಟ್ರಿಕ್ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ 
ಹಾಕಿ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಜಪಾನ್ ಮಣಿಸಿ ಹ್ಯಾಟ್ರಿಕ್ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ | Asian Champions Trophy

ಮೊಹಾಲಿ: ಭಾರತ ಪುರುಷರ ಹಾಕಿ ತಂಡವು ಮತ್ತೊಮ್ಮೆ ತಮ್ಮ ಪ್ರಾಬಲ್ಯವನ್ನು ಸಾಧಿಸಿದ್ದು, ಅಂತಿಮ ಹಣಾಹಣಿಯಲ್ಲಿ ಜಪಾನ್ ವಿರುದ್ಧ 4-1 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಸತತ ಮೂರನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಕಿರೀಟಕ್ಕೆ ಮುತ್ತಿಟ್ಟಿದೆ.

ಮೊಹಾಲಿಯ ಒಲಿಂಪಿಯನ್ ಬಲಬೀರ್ ಸಿಂಗ್ ಇಂಟರ್‌ನ್ಯಾಷನಲ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಜಪಾನ್ ತಂಡವನ್ನು ಮಣಿಸಿದ ಭಾರತ, 2023 ಮತ್ತು 2024ರ ಐತಿಹಾಸಿಕ ಸಾಧನೆಯನ್ನು ಈ ವರ್ಷ ಮಗದೊಮ್ಮೆ ರಿಪೀಟ್​ ಮಾಡಿದೆ. ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಗೆದ್ದು ಬೀಗಿದ್ದು, ಜಲಂಧರ್ ಹಾಗೂ ಮೊಹಾಲಿಯಲ್ಲಿ ನಡೆದ ಟೂರ್ನಿಯ ಎಲ್ಲಾ ಪಂದ್ಯಗಳಲ್ಲೂ ಜಯಭೇರಿ ಬಾರಿಸಿದ ಭಾರತಕ್ಕೆ ಇದು ಒಟ್ಟಾರೆ 6ನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಟ್ಟ ಎಂಬುದು ಗಮನಾರ್ಹ.

ಪಂದ್ಯದ ರೋಚಕ ಕ್ಷಣಗಳು

ಪಂದ್ಯದ ಮೊದಲ ಕ್ವಾರ್ಟರ್‌ನ 3ನೇ ನಿಮಿಷದಲ್ಲೇ ಜಪಾನ್‌ನ ಕಜುಮಾಸಾ ಮತ್ಸುಮೊಟೊ (Kazumasa Matsumoto) ರಿವರ್ಸ್ ಹಿಟ್ ಮೂಲಕ ಭರ್ಜರಿ ಗೋಲು ಬಾರಿಸಿ, ಭಾರತದ ಗೋಲ್ ಕೀಪರ್ ಸೂರಜ್ ಕರ್ಕೇರಾ ಅವರನ್ನು ಗೊಂದಲಕ್ಕೆ ದೂಡಿ, ತಮ್ಮ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು.

ಭಾರತ ಕಂಬ್ಯಾಕ್

ಆರಂಭಿಕ ಹಿನ್ನಡೆಯಿಂದ ಕಂಗೆಡದೆ ಕಂಬ್ಯಾಕ್ ಮಾಡಿದ ಭಾರತಕ್ಕೆ 42ನೇ ನಿಮಿಷದಲ್ಲಿ ಮೊದಲ ಗೋಲು ಸಿಕ್ಕಿತು. ಹರ್ಮನ್‌ಪ್ರೀತ್ ಸಿಂಗ್ ಅವರ ಪೆನಾಲ್ಟಿ ಕಾರ್ನರ್ ಶಾಟ್​ ಅನ್ನು ಜಪಾನ್ ಗೋಲ್‌ಕೀಪರ್ ಕಿಶೋ ಕುರೋಡಾ ತಡೆದರೂ, ಚೆಂಡಿನ ಕಂಟ್ರೋಲ್​ ಸಾಧಿಸಿದ ಭಾರತದ ಶೀಲಾನಂದ್ ಲಾಕ್ರಾ, ಆದಿತ್ಯ ಲಾಲಗೆ ನೀಡಲಾದ ಅದ್ಭುತ ಪಾಸ್ ಬಳಸಿ ಗೋಲಾಗಿ ಪರಿವರ್ತಿಸಿದರು. ಅಲ್ಲಿಗೆ, ಸ್ಕೋರ್ ಸಮಬಲ ( 1-1) ಆಯಿತು.

ಕೊನೆಯ ಕ್ವಾರ್ಟರ್‌ನಲ್ಲಿ ಭಾರತೀಯರ ಆರ್ಭಟ

48ನೇ ನಿಮಿಷದಲ್ಲಿ, ಹಾರ್ದಿಕ್ ಸಿಂಗ್ ನೀಡಿದ ಅದ್ಭುತ ಪಾಸ್‌ನ ನೆರವಿನಿಂದ ದಿಲ್‌ಪ್ರೀತ್ ಸಿಂಗ್ ಎರಡನೇ ಗೋಲು ಬಾರಿಸಿ ಭಾರತಕ್ಕೆ 2-1 ಮುನ್ನಡೆ ತಂದುಕೊಟ್ಟರು. 53ನೇ ನಿಮಿಷದಲ್ಲಿ, ಜುಗ್ರಾಜ್ ಸಿಂಗ್ ತಮ್ಮ ಪವರ್‌ಫುಲ್ ಡ್ರಾಗ್‌ಫ್ಲಿಕ್ ಪೆನಾಲ್ಟಿ ಕಾರ್ನರ್ ಮೂಲಕ ಮೂರನೇ ಗೋಲು ದಾಖಲಿಸಿದರು 3-1 ಅಂತರ ಸಾಧಿಸಲು ದೊಡ್ಡ ಕೊಡುಗೆ ನೀಡಿದರು.

ಇನ್ನು, 54ನೇ ನಿಮಿಷದಲ್ಲಿ, ವಿವೇಕ್ ಸಾಗರ್ ಪ್ರಸಾದ್ ಅವರು ಹಾಫ್ ವಾಲಿ ಶಾಟ್​ ಮೂಲಕ ನಾಲ್ಕನೇ ಗೋಲು ಬಾರಿಸಿ ಭಾರತದ ಗೆಲುವನ್ನು ಖಚಿತಪಡಿಸಿದರು. ತಮ್ಮ ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿದ್ದ ಜಪಾನ್ ತಂಡಕ್ಕೆ ಭಾರತದ ಆಕ್ರಮಣಕಾರಿ ಆಟಕ್ಕೆ ಉತ್ತರಿಸಲು ಸಾಧ್ಯವಾಗದೆ ಮತ್ತೆ ರನ್ನರ್-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇದೇ ವೇಳೆ ನಡೆದ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಮಲೇಷ್ಯಾ ತಂಡವು ದಕ್ಷಿಣ ಕೊರಿಯಾ ವಿರುದ್ಧ 5-2 ಅಂತರದ ಗೆಲುವು ಸಾಧಿಸಿ, ತೃತೀಯ ಸ್ಥಾನ ಅಲಂಕರಿಸಿತು,(ಏಜೆನ್ಸೀಸ್).