ಭಾರತಕ್ಕೆ ಕಿರಿಯರ ಏಷ್ಯಾಕಪ್ ಹಾಕಿ ಕಿರೀಟ
ಕಾಕಮಿಗಹರ (ಜಪಾನ್): ಭಾರತದ ಪುರುಷರ ತಂಡ 18 ವಯೋಮಿತಿ ಏಷ್ಯಾಕಪ್ ಹಾಕಿ (men''s Under-18 Asia Cup) ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವೇರಿದೆ. ಭಾರತ ತಂಡ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಆತಿಥೇಯ ಜಪಾನ್ ಎದುರು 4-1 ಗೋಲುಗಳಿಂದ ಗೆಲುವು ದಾಖಲಿಸಿತು.
ಭಾರತ ಪರ ಆಶಿಶ್ ತನಿ ಪೂರ್ತಿ (2, 28, 34) ಹ್ಯಾಟ್ರಿಕ್ ಗೋಲು ಬಾರಿಸಿ ಗೆಲುವಿನ ರೂವಾರಿ ಎನಿಸಿದರು. ನಾಯಕ ಕೇತನ್ ಕುಶ್ವಾಹ (30) ಭಾರತದ ಮತ್ತೊಂದು ಗೋಲು ಬಾರಿಸಿದರು. ಆಶಿಶ್ ಟೂರ್ನಿಯಲ್ಲಿ ಸರ್ವಾಧಿಕ 13 ಗೋಲು ಸಿಡಿಸಿದ ಸಾಧನೆ ಮಾಡಿದರು. ಕಿರಿಯರ ಏಷ್ಯಾಕಪ್ನಲ್ಲಿ ಭಾರತ 3ನೇ ಬಾರಿ ಪ್ರಶಸ್ತಿ ಜಯಿಸಿದೆ. ಈ ಮುನ್ನ 2001 ಮತ್ತು 2016ರಲ್ಲಿ ಪ್ರಶಸ್ತಿ ಗೆದ್ದಿತ್ತು.
ಮಹಿಳೆಯರಿಗೆ ಕಂಚು: ಮಹಿಳೆಯರ ವಿಭಾಗದಲ್ಲಿ ಭಾರತ ತಂಡ ಕಂಚಿನ ಪದಕದ ಹೋರಾಟದಲ್ಲಿ ದಣ ಕೊರಿಯಾ ವಿರುದ್ಧ 3-0 ಅಂತರದಿಂದ ಗೆಲುವು ಸಾಧಿಸಿತು.
ಕಿರಿಯರ ಏಷ್ಯಾಕಪ್ ವಿಜೇತ ಭಾರತದ ಪುರುಷರ ತಂಡದ ಆಟಗಾರರಿಗೆ ತಲಾ 3 ಲಕ್ಷ ರೂ. ಮತ್ತು ತರಬೇತಿ ಸಿಬ್ಬಂದಿಗೆ ತಲಾ 1.5 ಲಕ್ಷ ರೂ. ಬಹುಮಾನವನ್ನು ಹಾಕಿ ಇಂಡಿಯಾ ಪ್ರಕಟಿಸಿದೆ. ಕಂಚು ವಿಜೇತ ಮಹಿಳಾ ತಂಡದ ಆಟಗಾರ್ತಿಯರಿಗೆ ತಲಾ 1 ಲಕ್ಷ ರೂ. ಮತ್ತು ತರಬೇತಿ ಸಿಬ್ಬಂದಿಗೆ ತಲಾ 50 ಸಾವಿರ ರೂ. ಬಹುಮಾನ ಘೋಷಿಸಲಾಗಿದೆ.