ಡಚ್ಚರಿಗೆ ಶಾಕ್; ಅರ್ಜೆಂಟೀನಾಗೆ ಮಹಿಳಾ ಹಾಕಿ ವಿಶ್ವಕಪ್ ಕಿರೀಟ
ಆಮ್ಸ್ಟೆಲ್ವೀನ್: ಸತತ 4ನೇ ಮತ್ತು ಒಟ್ಟಾರೆ 10ನೇ ಬಾರಿ ಮಹಿಳೆಯರ ಹಾಕಿ ವಿಶ್ವಕಪ್ (
) ಜಯಿಸುವ ಸಹ-ಆತಿಥೇಯ ನೆದರ್ಲ್ಯಾಂಡ್ಸ್ ತಂಡದ ಕನಸನ್ನು ಅರ್ಜೆಂಟೀನಾ ಭಗ್ನಗೊಳಿಸಿದೆ. ಶನಿವಾರ ನಡೆದ ಫೈನಲ್ ಪಂದ್ಯದ ಪೆನಾಲ್ಟಿ ಶೂಟೌಟ್ನಲ್ಲಿ ಡಚ್ಚರ ತಂಡವನ್ನು 3-1 ಅಂತರದಿಂದ ಮಣಿಸುವ ಮೂಲಕ ಅರ್ಜೆಂಟೀನಾ 3ನೇ ಬಾರಿ ವಿಶ್ವ ಚಾಂಪಿಯನ್ ಪಟ್ಟವೇರಿದೆ. ಅರ್ಜೆಂಟೀನಾ ಈ ಮುನ್ನ 2002 ಮತ್ತು 2010ರಲ್ಲೂ ಮಹಿಳಾ ಹಾಕಿ ವಿಶ್ವಕಪ್ ಕಿರೀಟ ಗೆದ್ದಿತ್ತು.
ತವರು ಪ್ರೇಕ್ಷಕರ ಬೆಂಬಲದ ಬಲ ಹೊಂದಿದ್ದ ನೆದರ್ಲ್ಯಾಂಡ್ಸ್ ಪಂದ್ಯದ 30ನೇ ನಿಮಿಷದಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ 54ನೇ ನಿಮಿಷದಲ್ಲಿ ಪಂದ್ಯವನ್ನು ಸಮಬಲಕ್ಕೆ ತಂದ ಅರ್ಜೆಂಟೀನಾ, ಪೆನಾಲ್ಟಿ ಶೂಟೌಟ್ಗೆ ವಿಸ್ತರಿಸುವಲ್ಲಿ ಯಶಸ್ವಿಯಾಯಿತು. ಆಸ್ಟ್ರೆಲಿಯಾ ವಿರುದ್ಧ 1-0ಯಿಂದ ಗೆದ್ದ ಸಹ-ಆತಿಥೇಯ ಬೆಲ್ಜಿಯಂ ತಂಡ ಕಂಚಿನ ಪದಕ ಒಲಿಸಿಕೊಂಡಿತು.
ಹಾಲಿ ಚಾಂಪಿಯನ್ ಜರ್ಮನಿ ಮತ್ತು ಸ್ಪೇನ್ ತಂಡಗಳು ಪುರುಷರ ಹಾಕಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾನುವಾರ ಮುಖಾಮುಖಿ ಆಗಲಿವೆ. ಜರ್ಮನಿ ತಂಡ ಸತತ 2ನೇ ಬಾರಿ ವಿಶ್ವಕಪ್ ಜಯಿಸುವ ಮೂಲಕ ಗರಿಷ್ಠ 4 ಬಾರಿ ವಿಶ್ವ ಚಾಂಪಿಯನ್ ಪಟ್ಟವೇರಿದ ಪಾಕಿಸ್ತಾನದ ದಾಖಲೆ ಸರಿಗಟ್ಟುವ ತವಕದಲ್ಲಿದೆ. ಜರ್ಮನಿ 6 ಬಾರಿ ಫೈನಲ್ಗೇರಿದ ಪಾಕ್ ಸಾಧನೆಯನ್ನು ಈಗಾಗಲೆ ಸರಿಗಟ್ಟಿದೆ. ಸ್ಪೇನ್ ತಂಡ 28 ವರ್ಷಗಳ ಬಳಿಕ ಫೈನಲ್ಗೇರಿದ್ದು, 1971 ಮತ್ತು 1998ರಲ್ಲಿ ಹಿಂದಿನ 2 ಬಾರಿ ಕೈತಪ್ಪಿದ್ದ ಪ್ರಶಸ್ತಿಯನ್ನು ಈ ಬಾರಿ ಒಲಿಸಿಕೊಳ್ಳುವ ಹಂಬಲದಲ್ಲಿದೆ. ಈ ಮೂಲಕ ಹಾಕಿ ವಿಶ್ವಕಪ್ ಗೆದ್ದ 7ನೇ ತಂಡ ಎನಿಸುವ ಅವಕಾಶ ಸ್ಪೇನ್ ಮುಂದಿದೆ.
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್