ಕ್ರೀಡೆ

ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್; ಇಂದು ರಾಷ್ಟ್ರೀಯ ಕ್ರೀಡಾ ದಿನ

ಭಾರತೀಯ ಹಾಕಿ ಲೋಕದಲ್ಲಿ ಧ್ರುವತಾರೆಯಾಗಿ ಮೆರೆದ, ತಮ್ಮ ಕೈಚಳಕ, ಅಸಾಧಾರಣ ಪ್ರತಿಭೆ ಮೂಲಕ ಜಗತ್ತನ್ನೇ ಬೆರಗುಗೊಳಿಸಿದ ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಅಪ್ಪಟ ದೇಶಭಕ್ತರೂ ಆಗಿದ್ದರು. ಹಾಕಿ ಕ್ರೀಡೆಯಲ್ಲಿ ಭಾರತಕ್ಕೆ ಮೂರು ಬಾರಿ ‘ವಿಶ್ವ ಚಾಂಪಿಯನ್’ ಪಟ್ಟ ದೊರಕುವುದರಲ್ಲಿ ಧ್ಯಾನಚಂದ್ ಬಹುಮುಖ್ಯ ಪಾತ್ರ ವಹಿಸಿದರು. ತಮ್ಮ ದೇಶದ ಪರವಾಗಿ ಆಡುವಂತೆ ಹಿಟ್ಲರ್ ಕೇಳಿಕೊಂಡರೂ, ನೇರವಾಗಿ ನಿರಾಕರಿಸುವ ಮೂಲಕ ಎದೆಗಾರಿಕೆ ಮೆರೆದರು. ಭಾರತದ ಕೀರ್ತಿಯ ಕಿರೀಟಕ್ಕೆ ಚಿನ್ನದ ಗರಿಗಳನ್ನೇ ಸೇರಿಸುತ್ತ, ಹಲವು ಸಂದರ್ಭಗಳಲ್ಲಿ ಏಕಾಂಗಿ ಹೋರಾಟವನ್ನು ಮೆರೆದರು. 23 ವರ್ಷಗಳ ಹಾಕಿ ಅಂಗಳ ಯಾನದಿಂದ 185 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ, 570 ಗೋಲುಗಳನ್ನು ಗಳಿಸಿದರು. ಇದು ಇಂದಿಗೂ ಯಾರಿಂದಲೂ ಅಳಿಸಲಾಗದ ದಾಖಲೆ. ಸ್ವಾತಂತ್ರ್ಯಪೂರ್ವದಲ್ಲಿ ಅವರು ಭಾಗವಹಿಸಿದ ಮೂರು ಒಲಿಂಪಿಕ್ಸ್​ಗಳಲ್ಲಿ ಭಾರತ ಚಿನ್ನದ ಪದಕದ ಸಾಧನೆ ಮಾಡಿತು. ಆ ನಂತರದ ದಿನಗಳಲ್ಲಿ ಒಲಿಂಪಿಕ್ಸ್​ನಲ್ಲಿ ಭಾರತ ಆಡಿದ ಎಂಟು ಹಾಕಿ ಪಂದ್ಯಾವಳಿಗಳಲ್ಲಿ ಏಳರಲ್ಲಿ ಚಿನ್ನದ ಪದಕದ ಸಾಧನೆ ಸಾಕಾರವಾಯಿತು.

ಧ್ಯಾನಚಂದ್ ಅವರು ನ್ಯೂಜಿಲ್ಯಾಂಡ್ ನೆಲದಲ್ಲಿ 201 ಗೋಲುಗಳನ್ನು ಬಾರಿಸಿದ ಸುದ್ದಿಯನ್ನು ಕೇಳಿದ ಖ್ಯಾತ ಕ್ರಿಕೆಟರ್ ಡಾನ್ ಬ್ರಾಡಮನ್, ‘ಇದನ್ನು ಹಾಕಿ ಆಟಗಾರ ಹೊಡೆದನೋ ಅಥವಾ ಕ್ರಿಕೆಟ್ ಆಟಗಾರ ಹೊಡೆದನೋ’ ಎಂದು ಅಚ್ಚರಿಯ ಉದ್ಗಾರ ತೆಗೆದಿದ್ದರು. ನೇತಾಜಿ ಸುಭಾಷಚಂದ್ರ ಬೋಸ್ ಧ್ಯಾನಚಂದ್ ಅವರ ಆಟದ ವೈಖರಿಯನ್ನು ಒಮ್ಮೆ ಪ್ರತ್ಯಕ್ಷವಾಗಿ ನೋಡಿ ಮಂತ್ರಮುಗ್ಧರಾದರು. ‘ಇಷ್ಟೊಂದು ಕಲಾತ್ಮಕವಾಗಿ ಆಡುತ್ತೀರಿಯಲ್ಲ, ಇಷ್ಟೊಂದು ಶಕ್ತಿ ನಿಮಗೆ ಹೇಗೆ ಸಿಗುತ್ತದೆ?’ ಎಂದು ನೇತಾಜಿ ಕೇಳಿದಾಗ, ‘ಭಾರತದ ನೆಲದಲ್ಲಿ ಬೆಳೆಯುವ ಧಾನ್ಯದ ರೊಟ್ಟಿಯನ್ನು ತಿನ್ನುವುದರಿಂದ’ ಎಂದರು ಧ್ಯಾನಚಂದ್. ಈ ಮಾತನ್ನು ಕೇಳಿ ಖುಷಿಗೊಂಡ ನೇತಾಜಿ ಧ್ಯಾನಚಂದರನ್ನು ತಬ್ಬಿಕೊಂಡರು. ಹಾಕಿಯ ನಿಯಮಗಳನ್ನು ನೇತಾಜಿ ಆಸಕ್ತಿಯಿಂದ ಕೇಳಿ, ತಿಳಿದುಕೊಂಡರು.

ಯಾವುದೇ ಆಟಗಾರನಿಗೆ ತಾನು ತನ್ನ ದೇಶವನ್ನು ಪ್ರತಿನಿಧಿಸುತ್ತೇನೆ ಎನ್ನುವುದು ಬಹಳ ಹೆಮ್ಮೆಯ ಸಂಗತಿ. ಆ ಅವಕಾಶಕ್ಕಾಗಿ ಸದಾ ಕಾಯುತ್ತಿರುತ್ತಾನೆ. ದೇಶದ ಹೆಸರನ್ನು ಬೆಳಗುವುದಕ್ಕೆ, ದೇಶದ ಧ್ವಜವನ್ನು ದಿಗಂತದೆತ್ತರಕ್ಕೆ ಹಾರಿಸುವುದಕ್ಕೆ ಆತ ಸದಾ ಉತ್ಸುಕನಾಗಿರುತ್ತಾನೆ. ಆತನಿಗೆ ಇದಕ್ಕಿಂತಲೂ ಉತ್ತಮವಾದುದು, ಶ್ರೇಷ್ಠವಾದುದು ಬೇರೇನೂ ಬೇಕಾಗಿಲ್ಲ.

| ಧ್ಯಾನಚಂದ್

ಪುಸ್ತಕ ಲೋಕಾರ್ಪಣೆ: ಧ್ಯಾನಚಂದ್ ಅವರ 116ನೇ ಜನ್ಮದಿನದಂದೇ (ಆಗಸ್ಟ್ 29) ‘ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್-ಭಾರತೀಯ ಹಾಕಿ ಸುವರ್ಣ ಯುಗದ ದಂತಕಥೆ’ ಪುಸ್ತಕ ಲೋಕಾರ್ಪಣೆಯಾಗುತ್ತಿದೆ. ಡಾ.ನಾಗ ಎಚ್.ಹುಬ್ಳಿ ಅವರು ಬರೆದಿರುವ ಈ ಪುಸ್ತಕವನ್ನು ಬೆಂಗಳೂರಿನ ವಿಕ್ರಂ ಪ್ರಕಾಶನ ಪ್ರಕಟಿಸಿದೆ. ಭಾನುವಾರ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಆನ್​ಲೈನ್ ಕಾರ್ಯಕ್ರಮದಲ್ಲಿ ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಲೇಖಕ ಡಾ.ನಾಗ ಎಚ್.ಹುಬ್ಳಿ, ವಿಕ್ರಂ ಪ್ರಕಾಶನದ ಎಂ.ಆರ್.ಹರಿಪ್ರಸಾದ್ ಉಪಸ್ಥಿತರಿರಲಿದ್ದಾರೆ.

ಇಂದು ರಾಷ್ಟ್ರೀಯ ಕ್ರೀಡಾ ದಿನ

ಹಾಕಿ ದಿಗ್ಗಜ ಮೇಜರ್ ಧ್ಯಾನಚಂದ್ ಸ್ಮರಣಾರ್ಥವಾಗಿ ಅವರ ಜನ್ಮದಿನವನ್ನು ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾದಿನವಾಗಿ ಆಚರಿಸಲಾಗುತ್ತದೆ. ಉತ್ತರ ಪ್ರದೇಶದ ಅಲಹಾಬಾದ್​ನಲ್ಲಿ 1905ರ ಆಗಸ್ಟ್ 29ರಂದು ಜನಿಸಿದ ಧ್ಯಾನಚಂದ್ ತಮ್ಮ ಹಾಕಿ ಸ್ಟಿಕ್​ನ ಅಪೂರ್ವ ಕೌಶಲದಿಂದ ಜಗತ್ತನ್ನೇ ಮಂತ್ರಮುಗ್ಧಗೊಳಿಸಿದರು. 14ನೇ ವಯಸ್ಸಿನಲ್ಲೇ ಹಾಕಿ ಸ್ಟಿಕ್ ಹಿಡಿದ ಅವರು 1926ರಲ್ಲಿ ಅಂತಾರಾಷ್ಟ್ರೀಯ ಹಾಕಿ ಪ್ರವೇಶಿಸಿದರು. ನಂತರ ತಂಡದ ನಾಯಕರೂ ಆದ ಅವರು 3 ಒಲಿಂಪಿಕ್ಸ್ (1928, 1932, 1936) ಸ್ವರ್ಣ ಪದಕ ವಿಜೇತರು. 42ನೇ ವಯಸ್ಸಿನವರೆಗೂ ಹಾಕಿ ಆಡುತ್ತಿದ್ದ ಅವರು, 1948ರಲ್ಲಿ ನಿವೃತ್ತರಾದರು. ವೃತ್ತಿಜೀವನದಲ್ಲಿ ಅವರು 570 ಗೋಲು ಸಿಡಿಸಿದರು. 1956ರಲ್ಲಿ ಪದ್ಮಭೂಷಣ ಪ್ರಶಸ್ತಿಯಿಂದ ಪುರಸ್ಕೃತರಾದರು. 1979ರ ಡಿಸೆಂಬರ್ 3ರಂದು ಪಿತ್ತಜನಕಾಂಗದ ಕ್ಯಾನ್ಸರ್​ನಿಂದ ಅವರು ಮೃತಪಟ್ಟರು. ಅವರ ಸ್ಮರಣಾರ್ಥ ದೆಹಲಿಯ ರಾಷ್ಟ್ರೀಯ ಹಾಕಿ ಕ್ರೀಡಾಂಗಣಕ್ಕೆ ಧ್ಯಾನಚಂದ್ ಹೆಸರನ್ನು ಇಡಲಾಗಿದೆ. ಇತ್ತೀಚೆಗೆ ದೇಶದ ಅತ್ಯುನ್ನತ ಕ್ರೀಡಾ ಪುರಸ್ಕಾರ ‘ಖೇಲ್ ರತ್ನ’ಕ್ಕೆ ಅವರ ಹೆಸರು ಇಡಲಾಗಿದೆ. ರಾಷ್ಟ್ರೀಯ ಕ್ರೀಡಾದಿನದಂದೇ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡುವುದು ವಾಡಿಕೆಯಾಗಿದ್ದರೂ, ಈ ಬಾರಿ ಟೋಕಿಯೊ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್ ಸಾಧಕರನ್ನು ಪ್ರಶಸ್ತಿಗೆ ಪರಿಗಣಿಸುವ ಸಲುವಾಗಿ ಸಮಾರಂಭ ತಡವಾಗಿ ನಡೆಯಲಿದೆ.