ನವದೆಹಲಿ: ಸತತ ಎರಡು ಒಲಿಂಪಿಕ್ಸ್ಗಳಲ್ಲಿ ಪದಕ ಗೆದ್ದ ಸಾಧನೆಯ ಬಳಿಕ ಭಾರತೀಯ ಹಾಕಿ ಮತ್ತೆ ತನ್ನ ಗತವೈಭವಕ್ಕೆ ಮರಳಲು ಸಜ್ಜಾಗಿದೆ. ಐಪಿಎಲ್ ಮಾದರಿಯ ಹಾಕಿ ಟೂರ್ನಿಯಾದ "ಹಾಕಿ ಇಂಡಿಯಾ ಲೀಗ್' (ಎಚ್ಐಎಲ್) 7 ವರ್ಷಗಳ ಬಳಿಕ ಪುನರಾರಂಭಗೊಳ್ಳಲಿದ್ದು, ಈ ಸಲ ಪುರುಷರೊಂದಿಗೆ ಮಹಿಳಾ ವಿಭಾಗದಲ್ಲೂ ಸ್ಪರ್ಧೆ ನಡೆಯಲಿದೆ. ಈ ಮೂಲಕ ಭಾರತೀಯ ಹಾಕಿ ಮತ್ತೊಮ್ಮೆ ಹೊಸ ಚೈತನ್ಯ ಪಡೆದುಕೊಂಡಿದೆ.
ಟೂರ್ನಿಯಲ್ಲಿ ಆಡುವ ಪುರುಷರ 8 ಮತ್ತು ಮಹಿಳೆಯರ 4 ತಂಡಗಳನ್ನು ಹಾಕಿ ಇಂಡಿಯಾ ಶುಕ್ರವಾರ ಮಾರಾಟ ಮಾಡಿದೆ. ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ರ್ಟಿಕಿ ಅವರೇ ಎಚ್ಐಎಲ್ ಚೇರ್ಮನ್ ಆಗಿರುತ್ತಾರೆ.
ಮಾಜಿ ಟೆನಿಸ್ ತಾರೆ ಮಹೇಶ್ ಭೂಪತಿ ಒಡೆತನದ ಎಸ್ಜಿ ಸ್ಪೋರ್ಟ್ಸ್ ಆಂಡ್ ಎಂಟರ್ಟೈನ್ಮೆಂಟ್ ಸಂಸ್ಥೆ ದೆಹಲಿಯ ಪುರುಷರ ಮತ್ತು ಮಹಿಳಾ ತಂಡಗಳನ್ನು ಖರೀದಿಸಿದ್ದರೆ, ಜೆಎಸ್ಡಬ್ಲ್ಯು ಸ್ಪೋರ್ಟ್ಸ್ ಸಂಸ್ಥೆ ಪುರುಷರಲ್ಲಿ ಪಂಜಾಬ್ ಮತ್ತು ಮಹಿಳೆಯರಲ್ಲಿ ಹರಿಯಾಣ ತಂಡಗಳನ್ನು ಖರೀದಿಸಿದೆ. ಶ್ರಚಿ ಸ್ಪೋರ್ಟ್ಸ್ ಸಂಸ್ಥೆ ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಪಶ್ಚಿಮ ಬಂಗಾಳ (ಕೋಲ್ಕತ) ತಂಡಗಳನ್ನು ಖರೀದಿಸಿತು. ಚೆನ್ನೆ$, ಲಖನೌ, ಒಡಿಶಾ, ಹೈದರಾಬಾದ್, ಪುರುಷರ ತಂಡಗಳು ಕ್ರಮವಾಗಿ ಚಾರ್ಲ್ಸ್ ಗ್ರೂಪ್, ಯದು ಸ್ಪೋರ್ಟ್ಸ್, ವೇದಾಂತ ಲಿಮಿಟೆಡ್ ಮತ್ತು ರೆಸೊಲ್ಯೂಟ್ ಸ್ಪೋರ್ಟ್ಸ್ ಸಂಸ್ಥೆ ಪಾಲದವು. ನವೋಯಮ್ ಸ್ಪೋರ್ಟ್ಸ್ ವೆಂಚರ್ಸ್ ಪೆವೇಟ್ ಲಿಮಿಟೆಡ್ ಸಂಸ್ಥೆ ಪುರುಷರಲ್ಲಿ ರಾಂಚಿ ಮತ್ತು ಮಹಿಳೆಯರಲ್ಲಿ ಒಡಿಶಾ ತಂಡದ ಒಡೆತನ ಪಡೆದುಕೊಂಡಿತು. ಮಹಿಳೆಯರ ವಿಭಾಗದಲ್ಲಿ ಇನ್ನೂ 2 ತಂಡಗಳು ಮಾರಾಟವಾಗಲಿದ್ದು, ಅದರ ಮಾಲೀಕರ ಹೆಸರು ತಡವಾಗಿ ಪ್ರಕಟವಾಗಲಿದೆ.
11 ವರ್ಷಗಳ ಹಿಂದೆ 2013ರಲ್ಲೇ ಹುಟ್ಟಿಕೊಂಡಿದ್ದ ಎಚ್ಐಎಲ್, 2017ರವರೆಗೆ 5 ಆವೃತ್ತಿಗಳನ್ನು ಕಂಡಿತ್ತು.
ಅ. 13-15ಕ್ಕೆ ಹರಾಜು
ಆಟಗಾರರ ಹರಾಜು ಪ್ರಕ್ರಿಯೆ ಅಕ್ಟೋಬರ್ 13ರಿಂದ 15ರವರೆಗೆ ನವದೆಹಲಿಯಲ್ಲಿ ನಡೆಯಲಿದೆ. 3 ಕೆಟಗರಿಯಲ್ಲಿ ತಲಾ 2, 5, 10 ಲಕ್ಷ ರೂ.ನಿಂದ ಆಟಗಾರರ ಹರಾಜು ನಡೆಯಲಿದೆ. ಪ್ರತಿ ತಂಡ ಒಟ್ಟು 24 ಆಟಗಾರರನ್ನು ಹೊಂದಿರಬೇಕು. ಈ ಪೈಕಿ 16 ಭಾರತೀಯರಾಗಿರಬೇಕು ಮತ್ತು ಇದರಲ್ಲಿ ನಾಲ್ವರು ಜೂನಿಯರ್ ಆಟಗಾರರಾಗಿರಬೇಕು. ಉಳಿದಂತೆ 8 ವಿದೇಶಿ ಆಟಗಾರರು ಇರುತ್ತಾರೆ.
ಟೂರ್ನಿ ಯಾವಾಗ?
ಅಂತಾರಾಷ್ಟ್ರೀಯ ಹಾಕಿ ಒಕ್ಕೂಟ (ಎಫ್ಐಚ್) ಮುಂದಿನ 10 ವರ್ಷಗಳಿಗೆ ಎಚ್ಐಎಲ್ಗೆ ನೀಡಿರುವ ಸಮಯಾವಕಾಶದ ಪ್ರಕಾರ, ಈ ಬಾರಿ ಡಿಸೆಂಬರ್ 28ರಿಂದ ಫೆಬ್ರವರಿ 1ರವರೆಗೆ ಟೂರ್ನಿ ನಡೆಯಲಿದೆ. ಈ ಸಮಯದಲ್ಲಿ ವಿಶ್ವದೆಲ್ಲೆಡೆ ಬೇರಾವುದೇ ಅಂತಾರಾಷ್ಟ್ರೀಯ ಹಾಕಿ ಟೂರ್ನಿಗಳು ಇರುವುದಿಲ್ಲ. ಇದರಿಂದ ವಿದೇಶಿ ಆಟಗಾರರೂ ಟೂರ್ನಿಯಲ್ಲಿ ಆಡಲು ಅನುಕೂಲವಾಗಲಿದೆ. ಮಹಿಳಾ ಲೀಗ್ ಫೈನಲ್ ಪಂದ್ಯ ಜನವರಿ 26ರಂದು ರಾಂಚಿಯಲ್ಲಿ ಮತ್ತು ಪುರುಷರ ಲೀಗ್ ಫೈನಲ್ ಪಂದ್ಯ ಫೆಬ್ರವರಿ 1ರಂದು ರೌರ್ಕೆಲಾದಲ್ಲಿ ನಡೆಯಲಿದೆ. ಟೂರ್ನಿಯ ಎಲ್ಲ ಪಂದ್ಯಗಳು ರಾಂಚಿ ಮತ್ತು ರೌರ್ಕೆಲಾದಲ್ಲೇ ನಡೆಯಲಿವೆ.
*ನಾನು ಹಾಕಿ ಇಂಡಿಯಾ ಅಧ್ಯಕ್ಷನಾಗಿ ಆಯ್ಕೆಯಾದ ದಿನದಿಂದಲೂ ಎಚ್ಐಎಲ್ಗೆ ಮರುಜೀವ ನೀಡುವುದು ನನ್ನ ಕನಸಾಗಿತ್ತು. ವಿಶ್ವ ಹಾಕಿ ಬೆಳವಣಿಗೆಗೆ ಇದು ಪ್ರಮುಖವಾದ ಟೂರ್ನಿಯಾಗಿದೆ. ಈ ಟೂರ್ನಿಗಾಗಿ 35 ದಿನಗಳ ಕಾಲಾವಕಾಶ ಒದಗಿಸಿರುವ ಎಫ್ಐಎಚ್ಗೆ ಕೃತಜ್ಞನಾಗಿರುವೆ.
| ದಿಲೀಪ್ ರ್ಟಿಕಿ, ಎಚ್ಐಎಲ್ ಚೇರ್ಮನ್