ಕ್ರೀಡೆ

ವೃತ್ತಿಜೀವನದ ಸಂಧ್ಯಾಕಾಲದತ್ತ ಹಿಟ್​ಮ್ಯಾನ್​? ಚಾಂಪಿಯನ್ಸ್​ ಟ್ರೋಫಿ ನಂತರ ವಿದಾಯ ನಿರೀಕ್ಷೆ...

ನವದೆಹಲಿ: ಸಿಡ್ನಿ ಟೆಸ್ಟ್​ನಿಂದ ಹೊರಗುಳಿಯುವುದರೊಂದಿಗೆ ಮೆಲ್ಬೋರ್ನ್​ ಪಂದ್ಯವೇ ರೋಹಿತ್​ ಶರ್ಮರ ಕೊನೇ ಟೆಸ್ಟ್​ ಆಗುವ ನಿರೀಕ್ಷೆ ಹೆಚ್ಚಾಗಿದೆ. ಇದರೊಂದಿಗೆ ಫೆಬ್ರವರಿ-ಮಾರ್ಚ್​ನಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿಯ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲೂ ಅವರು ಮುಂದುವರಿಯುವ ಸಾಧ್ಯತೆ ಕ್ಷೀಣಿಸಿದೆ. 37 ವರ್ಷದ ರೋಹಿತ್​ ವೃತ್ತೀಜಿವನ ಈಗ ಸಂಧ್ಯಾಕಾಲದತ್ತ ಮುಖಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ ವರ್ಷ ಟಿ20 ವಿಶ್ವಕಪ್​ ಗೆದ್ದ ಬೆನ್ನಲ್ಲೇ ಚುಟುಕು ಕ್ರಿಕೆಟ್​ ಮಾದರಿಗೆ ವಿದಾಯ ಘೋಷಿಸಿದ್ದರು.

ಆಸ್ಟ್ರೆಲಿಯಾ ಪ್ರವಾಸದ ನಂತರದಲ್ಲಿ ರೋಹಿತ್​ರನ್ನು ಟೆಸ್ಟ್​ ಕ್ರಿಕೆಟ್​ನಲ್ಲಿ ಆಡಿಸಲು ಆಯ್ಕೆಗಾರರು ಒಲವು ಹೊಂದಿಲ್ಲ. ಇದನ್ನು ಈಗಾಗಲೆ ಸಿಡ್ನಿ ಟೆಸ್ಟ್​ ಪಂದ್ಯಕ್ಕೆ ಮುನ್ನ ಅವರಿಗೆ ಸ್ಪಷ್ಟಪಡಿಸಲಾಗಿದೆ. ಆಸೀಸ್​ ಪ್ರವಾಸದ ನಂತರ ಆಯ್ಕೆಗಾರರು ಮತ್ತೋರ್ವ ಪ್ರಮುಖ ಬ್ಯಾಟರ್​ ವಿರಾಟ್​ ಕೊಹ್ಲಿ ಜತೆಗೂ ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ. ಆದರೆ ತಂಡದಲ್ಲಿರುವ ಇನ್ನೋರ್ವ ಅನುಭವಿ ಆಟಗಾರ ರವೀಂದ್ರ ಜಡೇಜಾರನ್ನು ಇನ್ನೂ ಒಂದೆರಡು ವರ್ಷಗಳ ಕಾಲ ಟೆಸ್ಟ್​ ಕ್ರಿಕೆಟ್​ನಲ್ಲಿ ಮುಂದುವರಿಸಲು ಆಯ್ಕೆಗಾರರು ಒಲವು ಹೊಂದಿದ್ದಾರೆ. ಅವರ ಮೌಲ್ಯಕ್ಕೆ ತಕ್ಕ ಬದಲಿ ಆಲ್ರೌಂಡರ್​ ಸದ್ಯಕ್ಕೆ ಲಭ್ಯ ಇಲ್ಲದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ಚಾಂಪಿಯನ್ಸ್​ ಟ್ರೋಫಿ ನಂತರದಲ್ಲಿ ಭಾರತ ಆಗಸ್ಟ್​ವರೆಗೆ ಬೇರಾವುದೇ ಏಕದಿನ ಸರಣಿ ಹೊಂದಿಲ್ಲ. ಅಲ್ಲದೆ ಭಾರತ, ಚಾಂಪಿಯನ್ಸ್​ ಟ್ರೋಫಿ ನಂತರ 2027ರ ಏಕದಿನ ವಿಶ್ವಕಪ್​ಗೆ ತಂಡ ಕಟ್ಟುವ ಕೆಲಸ ಆರಂಭಿಸಬೇಕಾಗಿದ್ದು, 2027ರ ವೇಳೆ ರೋಹಿತ್​ಗೆ 40 ವರ್ಷ ಆಗಲಿರುವುದರಿಂದ ಅವರು ಅದುವರೆಗೆ ಆಡುವುದು ಅನುಮಾನವಿದೆ. ಹಾಲಿ ಫಾರ್ಮ್​-ಫಿಟ್ನೆಸ್​ ಕೂಡ ಅವರಿಗೆ ಪೂರಕವಾಗಿಲ್ಲ. ಹೀಗಾಗಿ ರೋಹಿತ್​ರ 17 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್​ ಜೀವನ ಇನ್ನು 2 ತಿಂಗಳಲ್ಲಿ ಪೂರ್ಣವಿರಾಮ ಕಾಣುವ ಲಕ್ಷಣಗಳೇ ಹೆಚ್ಚಾಗಿವೆ.