ಕ್ರೀಡೆ

ಯಾವ ಕ್ಷಣ ಬೇಕಾದರೂ ಮ್ಯಾಜಿಕ್​ ಮಾಡಬಲ್ಲ; ಸ್ಟಾರ್​ ಆಟಗಾರನನ್ನು ಹಾಡಿಹೊಗಳಿದ Team India ಕೋಚ್​

ಕಾನ್ಪುರ: ಇಲ್ಲಿನ ಗ್ರೀನ್​ ಪಾರ್ಕ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ (Team India) ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್​ ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯರು ಗೆಲುವಿನತ್ತ ದಾಪುಗಾಲಿಟ್ಟಿದ್ದು, ಪಾಕಿಸ್ತಾನವನ್ನು ಮಣಿಸಿ ಐತಿಹಾಸಿಕ ದಾಖಲೆ ಬರೆದಿದ್ದ ಪ್ರವಾಸಿ ತಂಡಕ್ಕೆ ದೊಡ್ಡ ಹೊಡೆತ ನೀಡಿದ್ದಾರೆ. ಇತ್ತ ಟೆಸ್ಟ್​ ಕ್ರಿಕೆಟ್​ಅನ್ನು ಟಿ20 ಮಾದರಿಯಲ್ಲಿ ಆಡಿದ ಭಾರತದ ಬ್ಯಾಟ್ಸ್​ಮನ್​ಗಳು ಹಲವು ದಾಖಲೆಗಳನ್ನು ಬರೆದಿದ್ದು, ಆಲ್ರೌಂಡರ್​ ರವೀಂದ್ರ ಜಡೇಜಾ ಕೂಡ ಹೊಸ ದಾಖಲೆಗೆ ಸೇರ್ಪಡೆಯಾಗಿದ್ದಾರೆ.

ಇನ್ನೂ ರವೀಂದ್ರ ಜಡೇಜಾ (Ravindra jadeja) ಅವರ ಸಾಧನೆಯನ್ನು ಕೊಂಡಾಡಿರುವ ಟೀಮ್​ ಇಂಡಿಯಾದ ಬೌಲಿಂಗ್​ ಕೋಚ್​ ಮಾರ್ನ್​​ ಮಾರ್ಕೆಲ್​ ಆತ ಮ್ಯಾಜಿಕ್​ ರಚಿಸಬಲ್ಲ ಆಟಗಾರ ಎಂದು ಬಣ್ಣಿಸಿದ್ದಾರೆ. ಈ ಕುರಿತು ಮಾತನಾಡಿರುವ ಮಾರ್ಕೆಲ್​ ಜಡೇಜಾರನ್ನು ಹಾಡಿ ಹೊಗಳಿದ್ದಾರೆ.

ನನ್ನ ಪಾಲಿಗೆ ಆತ ಸಂಪೂರ್ಣ ಪ್ಯಾಕೇಜ್​ ಇದ್ದಂತೆ. ನಿಮಗೆ ಗೊತ್ತಾ ಆತ ಬ್ಯಾಟಿಂಗ್​, ಬೌಲಿಂಗ್​ ಮಾಡುತ್ತಾನೆ. ಮೈದಾನದಲ್ಲಿ ಯಾವ ಕ್ಷಣ ಬೇಕಾದರೂ ಮ್ಯಾಜಿಕ್​ ಮಾಡಬಲ್ಲ ಆಟಗಾರ ಆತ. ತಂಡದಲ್ಲಿ ನಿಮಗೆ ಬೇಕಾದ ಒಬ್ಬ ವ್ಯಕ್ತಿ ಯಾವಾಗಲೂ ಇರುತ್ತಾನೆ ಮತ್ತು ಆತ ಭಾರತಕ್ಕಾಗಿ ಅದನ್ನು ಹಲವು ವರ್ಷಗಳಿಂದ ಮಾಡಿದ್ದಾನೆ. ಏಕೆಂದರೆ 300 ವಿಕೆಟ್​ ಕ್ಲಬ್​ ಸೇರುವುದು ಅಷ್ಟು ಸುಲಭದ ಮಾತಲ್ಲ. ಆತ ತನ್ನ ಆಟದ ಮೂಲಕ ಎಲ್ಲರಿಗೂ ಉತ್ತರ ಕೊಡುತ್ತಾನೆ. ನೀವು ಕೂಡ ಅದನ್ನು ನೋಡಿದ್ದೀರಿ ಎಂದು ರವೀಂದ್ರ ಜಡೇಜಾರನ್ನು ಮಾರ್ನ್​​ ಮಾರ್ಕೆಲ್​ ಹಾಡಿಹೊಗಳಿದ್ದಾರೆ.

ಒಂದು ವಿಕೆಟ್​ ಐದು ಸಾಧನೆ

35 ವರ್ಷದ ಆಲ್ರೌಂಡರ್ ರವೀಂದ್ರ ಜಡೇಜಾ ಬಾಂಗ್ಲಾದೇಶದ ಖಾಲಿದ್ ಅಹ್ಮದ್ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ವೈಯಕ್ತಿಕವಾಗಿ ಹಲವು ಮೈಲಿಗಲ್ಲು ಸ್ಥಾಪಿಸಿದರು. ಜಡೇಜಾ ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್ ಹಾಗೂ 3 ಸಾವಿರ ಪ್ಲಸ್ ರನ್ ಸಾಧನೆ ಮಾಡಿದ ವಿಶ್ವದ 11ನೇ ಹಾಗೂ ಮೂರನೇ ಭಾರತೀಯ ಎನಿಸಿದರು. ಆರ್.ಅಶ್ವಿನ್, ಕಪಿಲ್ ದೇವ್ ಮೊದಲಿಬ್ಬರು ಭಾರತೀಯರಾಗಿದ್ದಾರೆ. ಜತೆಗೆ 74ನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ ಜಡೇಜಾ ಟೆಸ್ಟ್ ಕ್ರಿಕೆಟ್‌ನಲ್ಲಿ 2ನೇ ಅತಿವೇಗವಾಗಿ ಸಾಧಿಸಿದ ಆಟಗಾರ ಎನಿಸಿದರು. ಇಂಗ್ಲೆಂಡ್ ಇಯಾನ್ ಬಾಥಂ (72) ಅಗ್ರಸ್ಥಾನದಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್ ಪಡೆದ 7ನೇ ಭಾರತೀಯ ಬೌಲರ್ ಎನಿಸಿದ ಜಡೇಜಾ, ವಿಶ್ವದ ಮೂರನೇ ಎಡಗೈ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಂಗನಾ ಹೆರಾತ್ (433), ಡೇನಿಯಲ್ ವೆಟ್ಟೋರಿ (362) ಹಿಂದಿನ ಸಾಧಕರು.