ಮಾರ್ಗೋವಾ: ಐಪಿಎಲ್ ಟಿ20 ಟೂರ್ನಿ ಮುಗಿದ ಬೆನ್ನಲ್ಲೇ ಫುಟ್‌ಬಾಲ್ ಹಬ್ಬ ರಂಗೇರಲು ಸಜ್ಜಾಗಿದೆ. ದೇಶದ ಪ್ರತಿಷ್ಠಿತ ಫುಟ್‌ಬಾಲ್ ಟೂರ್ನಿ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 2020-21ರ ಆವೃತ್ತಿಗೆ ನವೆಂಬರ್ 20ರಂದು ಚಾಲನೆ ಸಿಗಲಿದೆ. ಜನವರಿ 11ರವರೆಗಿನ ಮೊದಲ ಹಂತದ 55 ಲೀಗ್ ಪಂದ್ಯಗಳ ವೇಳಾಪಟ್ಟಿಯನ್ನು ಶುಕ್ರವಾರ ಬಿಡುಗಡೆಗೊಳಿಸಲಾಗಿದೆ. ಮಾಜಿ ಚಾಂಪಿಯನ್ ಬೆಂಗಳೂರು ಎಫ್ಸಿ ತಂಡ ನವೆಂಬರ್ 22ರಂದು ಆತಿಥೇಯ ಎಫ್ಸಿ ಗೋವಾ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ.
ಕರೊನಾ ಭೀತಿಯ ನಡುವೆ ಎಲ್ಲ ಪಂದ್ಯಗಳು ಗೋವಾದಲ್ಲಿ ಪ್ರೇಕ್ಷಕರಿಲ್ಲದೆ 3 ಖಾಲಿ ಕ್ರೀಡಾಂಗಣಗಳಲ್ಲಿ ನಡೆಯಲಿವೆ. ಎಸ್‌ಸಿ ಈಸ್ಟ್ ಬೆಂಗಾಲ್ ತಂಡದ ಸೇರ್ಪಡೆಯೊಂದಿಗೆ ಈ ಬಾರಿ ಒಟ್ಟು 11 ತಂಡಗಳು ಕಣದಲ್ಲಿವೆ. ಇದಲ್ಲದೆ ಕೋಲ್ಕತದ ಪ್ರತಿಷ್ಠಿತ ಮೋಹನ್ ಬಗಾನ್ ತಂಡ ಈ ಬಾರಿ ಎಟಿಕೆ ತಂಡದೊಂದಿಗೆ ವಿಲೀನವಾಗುತ್ತಿದ್ದು, ಎಟಿಕೆ ಮೋಹನ್ ಬಗಾನ್ ಹೆಸರಿನಲ್ಲಿ ತಂಡ ಕಣಕ್ಕಿಳಿಯಲಿದೆ. ಟೂರ್ನಿಗಾಗಿ ಈಗಾಗಲೆ ಗೋವಾದಲ್ಲಿ ಐಪಿಎಲ್ ಮಾದರಿಯ ಬಯೋ-ಬಬಲ್ ಸೃಷ್ಟಿಸಲಾಗಿದ್ದು, ಎಲ್ಲ ತಂಡಗಳು ಪ್ರತ್ಯೇಕ ಹೋಟೆಲ್‌ನಲ್ಲಿ ಉಳಿದುಕೊಂಡಿವೆ.
ಟೂರ್ನಿಯಲ್ಲಿ ಒಟ್ಟು 115 ಪಂದ್ಯಗಳು ನಡೆಯಲಿದ್ದು, ಫೆಬ್ರವರಿವರೆಗೂ ಲೀಗ್ ಪಂದ್ಯಗಳು ಸಾಗಲಿವೆ. ಬಳಿಕ ಅಗ್ರ 4 ತಂಡಗಳು ಸೆಮಿಫೈನಲ್ ಹಂತಕ್ಕೇರಲಿವೆ. ಈಸ್ಟ್ ಬೆಂಗಾಲ್ ಮತ್ತು ಎಟಿಕೆ ಮೋಹನ್ ಬಗಾನ್ ನಡುವಿನ ಪ್ರತಿಷ್ಠಿತ ಕೋಲ್ಕತ ಡರ್ಬಿ ನವೆಂಬರ್ 27ರಂದು ನಡೆಯಲಿದೆ. ನವೆಂಬರ್ 20ರಿಂದ ಪ್ರತಿದಿನ ರಾತ್ರಿ 7.30ರಿಂದ ಪಂದ್ಯಗಳು ನಡೆಯಲಿವೆ. 2 ಪಂದ್ಯಗಳಿರುವ ವಾರಾಂತ್ಯದ ದಿನಗಳಲ್ಲಿ ಮೊದಲ ಪಂದ್ಯ ಸಂಜೆ 5 ಗಂಟೆಗೆ ಆರಂಭಗೊಳ್ಳಲಿದೆ. ಈ ಬಾರಿ ಬೆಂಗಳೂರು ಎಫ್ಸಿ ತನ್ನ ಎಲ್ಲ ತವರು ಪಂದ್ಯಗಳನ್ನು ಫಟೋರ್ಡ ಕ್ರೀಡಾಂಗಣದಲ್ಲಿ ಆಡಲಿದೆ. ವಾಸ್ಕೋದ ತಿಲಕ್ ಮೈದಾನ್ ಮತ್ತು ಬಂಬೊಲಿಮ್‌ನ ಜಿಎಂಸಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ಇತರ ಪಂದ್ಯಗಳು ನಡೆಯಲಿವೆ.