ಚೆನ್ನೈ: 2008ರಲ್ಲಿ ಐಪಿಎಲ್ ಪ್ರಾರಂಭವಾದಾಗಿನಿಂದ ಇಂದಿನವರೆಗೆ ಟೀಂ ಇಂಡಿಯಾದ ಮಾಜಿ ನಾಯಕ, ಕ್ರಿಕೆಟ್ ಲೋಕದ ದಿಗ್ಗಜ, ಮಹೇಂದ್ರ ಸಿಂಗ್ ಧೋನಿಯನ್ನು ಅಪಾರ ಸಂಖ್ಯೆಯ ಅಭಿಮಾನಿಗಳು ಆರಾಧಿಸಿ, ಸಂಭ್ರಮಿಸುತ್ತಾರೆ. ಇಡೀ ಐಪಿಎಲ್ ಲೀಗ್‌ನಲ್ಲಿ ಅತ್ಯಂತ ಜನಪ್ರಿಯ ಆಟಗಾರರ ಪಟ್ಟಿಯಲ್ಲಿ ಮಾಹಿ ಮುಂಚೂಣಿಯಲ್ಲಿದ್ದಾರೆ. ಭಾರತ ಕಂಡ ಶ್ರೇಷ್ಠ ನಾಯಕ, ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಆದ ಧೋನಿ, 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದರೂ ಸಹ ಇಂದಿಗೂ ಅವರ ಮೇಲಿನ ಅಭಿಮಾನ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ.
ಎಲ್ಲಾ ಕ್ರಿಕೆಟ್ ಫಾರ್ಮೆಟ್ನಿಂದ ನಿವೃತ್ತಿ ಪಡೆದಿರುವ ಎಂಎಸ್ಡಿ, ಸದ್ಯ ವರ್ಷದಲ್ಲಿ ಎರಡು ತಿಂಗಳು ನಡೆಯುವ ಐಪಿಎಲ್ ಸೀಸನ್ನಲ್ಲಿ ಮಾತ್ರ ಆಡುತ್ತಿದ್ದಾರೆ. ತಮ್ಮ ನೆಚ್ಚಿನ ಕ್ಯಾಪ್ಟನ್ ನೋಡಲು ಅಪಾರ ಸಂಖ್ಯೆಯಲ್ಲಿ ವರ್ಷ ಪೂರ್ತಿ ಕಾಯುವ ಅಭಿಮಾನಿಗಳು, ಪಂದ್ಯದ ದಿನ ಸ್ಟೇಡಿಯಂ ಪೂರ ಆವರಿಸಿಕೊಂಡಿರುತ್ತಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ತವರಾದ ಚೆನ್ನೈನ ಚೇಪಾಕ್ ಸ್ಟೇಡಿಯಂ ಹೊರತುಪಡಿಸಿ, ಬೇರೆ ರಾಜ್ಯದ ಕ್ರೀಡಾಂಗಣಕ್ಕೆ ಹೋದರು ಅಲ್ಲಿಯೂ ಧೋನಿ ಫ್ಯಾನ್ಸ್ಗಳದ್ದೇ ಆರ್ಭಟ.
ಸಿಎಸ್ಕೆ ತಂಡದ ಭಾವುಟ ಹಿಡಿದು ಸ್ಟೇಡಿಯಂ ಸುತ್ತಲೂ ಆವರಿಸಿಕೊಳ್ಳುವ ಅಭಿಮಾನಿಗಳು, ಧೋನಿ ಹೆಸರನ್ನು ಬಿಟ್ಟರೆ ಇನ್ಯಾವ ಆಟಗಾರರ ಹೆಸರನ್ನು ಕೂಗಲು ಬಯಸುವುದಿಲ್ಲ. ಒಂದು ರೀತಿ ಮಾಹಿ ಬಿಟ್ಟರೆ, ಇನ್ಯಾರು ಬೇಕಿಲ್ಲ, ಗೊತ್ತಿಲ್ಲ ಎನ್ನುವಂತೆ ಪಂದ್ಯ ವೀಕ್ಷಣೆಗೆ ಮೂರು ಗಂಟೆಗಳ ಮುಂಚಿತವಾಗಿಯೇ ಸ್ಟೇಡಿಯಂಗೆ ಜಮಾಯಿಸಿರುತ್ತಾರೆ ಈ ಅಭಿಮಾನಿಗಳು. ಪ್ರತಿ ಪಂದ್ಯದಲ್ಲಿ ಧೋನಿ...ಧೋನಿ ಎಂದು ಕೂಗುವ ಅಭಿಮಾನಿಗಳ ಚೀರಾಟ ಎಷ್ಟು ಡೆಸಿಬಲ್ ಇದೆ? ಇಲ್ಲಿಯವರೆಗು ಇದೇ ಅಧಿಕನಾ? ಎಂಬುದರ ಡೇಟಾವನ್ನು ಇತ್ತೀಚೆಗೆ ಸ್ಟಾರ್ ಸ್ಪೋರ್ಟ್ ಬಿಡುಗಡೆಗೊಳಿಸಿದೆ.
ಮಹೇಂದ್ರ ಸಿಂಗ್ ಧೋನಿಯ ಜನಪ್ರಿಯತೆಯು 2024ರ ಐಪಿಎಲ್ ಸೀಸನ್ನಲ್ಲಿ ಮತ್ತಷ್ಟು ಏರಿಕೆಯಾಗಿದ್ದು, ಅದು ಕಳೆದ ಪಂದ್ಯಗಳಲ್ಲಿ ಸಾಬೀತಾಗಿದೆ. ಸ್ಟಾರ್ ಸ್ಪೋರ್ಟ್ಸ್ ಶುಕ್ರವಾರ ಡೆಸಿಬಲ್ ಮಟ್ಟಗಳ ಡೇಟಾವನ್ನು ಬಿಡುಗಡೆಗೊಳಿಸಿದೆ. ಇದರ ಪ್ರಕಾರ, ಮೊದಲ ಸ್ಥಾನ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ವೇಳೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಧೋನಿ ಎಂಟ್ರಿಗಾಗಿ ಕಾದು ಕುಳಿತ್ತಿದ್ದ ಅಭಿಮಾನಿಗಳು, ಧೋನಿ, ಧೋನಿ.. ಎಂದು 130 ಡೆಸಿಬಲ್‌ಗಳವರೆಗೂ ಕೂಗಿದ್ದಾರೆ. ಇದಕ್ಕೆ ಕಾರಣ ರುತುರಾಜ್ ಗಾಯಕ್‌ವಾಡ್‌ಗೆ ಕ್ಯಾಪ್ಟನ್ ಸ್ಥಾನ ಹಸ್ತಾಂತರಿಸಿದ ಬಳಿಕ ಅಭಿಮಾನಿಗಳು ಧೋನಿಯನ್ನು ಮೈದಾನದಲ್ಲಿ ನೋಡಿದ್ದು ಅದೇ ಮೊದಲು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಧೋನಿ ಕೇವಲ 16 ಎಸೆತಗಳಲ್ಲಿ 37 ರನ್ ಸಿಡಿಸಿದರು. ಈ ವೇಳೆ ಯುವಕನಂತೆ ಆರ್ಭಟಿಸಿದ ಧೋನಿಗೆ ಪ್ರೋತ್ಸಾಹಿಸಿದ ಅಭಿಮಾನಿಗಳು, 128 ಡೆಸಿಬಲ್ನಲ್ಲಿ ಕೂಗಿದರು. ಇದು 2ನೇ ಸ್ಥಾನವನ್ನು ಪಡೆಯುತ್ತದೆ. ಫ್ಯಾನ್ಸ್ ಮಾಹಿಯನ್ನು 'ಥಲಾ ಫಾರ್ ಎ ರೀಸನ್' ಎಂದು ಕರೆಯಲು ಇವೆಲ್ಲಾ ಪ್ರಮುಖ ಕಾರಣ ಎಂದೇ ಹೇಳಬಹುದು.
ಇದನ್ನೂ ಓದಿ: ಗ್ಯಾಸ್ಟ್ರಿಕ್ ಚಿಕಿತ್ಸೆಗೆ ಆಸ್ಪತ್ರೆಗೆ ಹೋದ ಮಗನ ಜೀವವೇ ಹೋಯ್ತು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದ ಕಣ್ಣೀರಿಟ್ಟ ತಂದೆ
ಧೋನಿಯನ್ನು ಹೊರತುಪಡಿಸಿದರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ವೇಳೆ ಅರ್ಷದೀಪ್ ಸಿಂಗ್ ಬೌಲಿಂಗ್‌ಗೆ ದಿನೇಶ್ ಕಾರ್ತಿಕ್ ಅವರ ಸ್ಕೂಪ್, ಡೆಸಿಬಲ್ ಮಟ್ಟವನ್ನು 128ಕ್ಕೆ ಏರಿಸಿತು. 10 ಎಸೆತಗಳಲ್ಲಿ ಕಾರ್ತಿಕ್ ಗಳಿಸಿದ 28 ರನ್ ಈ ಕೂಗಿಗೆ ಪ್ರಮುಖ ಕಾರಣವಾಯಿತು,(ಏಜೆನ್ಸೀಸ್).