ನವದೆಹಲಿ: ಟೀಮ್ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿದ ರಾಹುಲ್ ದ್ರಾವಿಡ್ ಅವರ ಉತ್ತರಾಧಿಕಾರಿಯಾಗಿ ಯಾರು ಅಧಿಕಾರ ವಹಿಸಿಕೊಳ್ಳುತ್ತಾರೆ ಎಂಬ ಕುತೂಹಲ ಕಳೆದ ಒಂದು ತಿಂಗಳಿಂದ ಎಲ್ಲರಲ್ಲೂ ಮನೆ ಮಾಡಿತ್ತು. ಅಭಿಮಾನಿಗಳ ಜೊತೆಗೆ, ಮಾಜಿ ಕ್ರಿಕೆಟಿಗರು ಮತ್ತು ಕ್ರೀಡಾ ತಜ್ಞರು ಕೂಡ ಈ ವಿಷಯದ ಬಗ್ಗೆ ತುಂಬಾ ಆಸಕ್ತಿ ತೋರಿಸಿದ್ದರು. ಕೊನೆಗೂ ಕುತೂಹಲಕ್ಕೆ ತೆರೆಬಿದ್ದಿದ್ದು, ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ದಿಗ್ಗಜ ಆಟಗಾರ ಗೌತಮ್ ಗಂಭೀರ್ ಅವರನ್ನು ಬಿಸಿಸಿಐ ನೇಮಕ ಮಾಡಿದೆ.
ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾ ವಿರುದ್ಧ ಆರಂಭವಾಗುವ ಸರಣಿಯಲ್ಲಿ ಗಂಭೀರ್ ಮುಖ್ಯ ಕೋಚ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಇದಾದ ಬಳಿಕ 2025ರಲ್ಲಿ ಚಾಂಪಿಯನ್ಸ್ ಟ್ರೋಪಿ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್, 2026ರಲ್ಲಿ ಟಿ20 ವಿಶ್ವಕಪ್, 2027ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಹಾಗೂ ಏಕದಿನ ವಿಶ್ವಕಪ್ಗೆ ತಂಡವನ್ನು ಸಜ್ಜುಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಕೆಲವೊಂದು ಬದಲಾವಣೆಗಳತ್ತ ಗಂಭೀರ್ ಗಮನಹರಿಸಿದ್ದು, ಟೀಮ್ ಇಂಡಿಯಾದಲ್ಲಿ ಹೊಸ ಅಧ್ಯಾಯ ಆರಂಭಿಸಲು ಗೌತಿ ಮುಂದಾಗಿದ್ದಾರೆ. ಇದರ ನಡುವೆಯೇ ಮಾಜಿ ಆಟಗಾರರೊಬ್ಬರು ಗೌತಮ್ ಗಂಭೀರ್ ಕುರಿತು ನೀಡಿರುವ ಹೇಳಿಕೆ ಸಖತ್ ವೈರಲ್ ಆಗುತ್ತಿದೆ.
ಟೀಮ್ ಇಂಡಿಯಾ ನೂತನ ಕೋಚ್ ಆಗಿ ಗೌತಮ್ ಗಂಭೀರ್ ನೇಮಕಗೊಂಡಿರುವ ಕುರಿತು ಮಾತನಾಡಿರುವ ದಕ್ಷಿಣ ಆಫ್ರಿಕಾದ ಲೆಜೆಂಡರಿ ಆಟಗಾರ ಜಾಕ್ ಕಾಲಿಸ್, ಕೋಚ್ ಆಗಿ ಗೌತಮ್ ನುತನ ಜವಾಬ್ದಾರಿಯನ್ನು ವಹಿಸಿಕೊಂಡಿರುವುದನ್ನು ನೋಡಿ ತುಂಬಾ ಖುಷಿಯಾಗುತ್ತಿದೆ. ಕ್ರಿಕೆಟ್ ಬಗ್ಗೆ ಆತನಿಗೆ ಹೆಚ್ಚಿನ ಅರಿವಿದ್ದು, ಬೆಂಕಿ ಹಚ್ಚುತ್ತಾನೆ ಎಂಬ ನಂಬಿಕೆ ನನಗಿದೆ. ಆಟವನ್ನು ಆಕ್ರಮಣಕಾರಿಯಾಗಿ ಆಡಲು ಇಷ್ಟಪಡುವ ಗೌತಮ್ ತಂಡಕ್ಕೆ ಹೊಸ ಸ್ಪರ್ಶ ನೀಡುತ್ತಾನೆ. ಗೌತಮ್ ಕೋಚ್ ಆದ ಬಳಿಕ ಆಟಗಾರರು ಆತನಿಂದ ಸಾಕಷ್ಟು ಕಲಿಯುತ್ತಾರೆ. ಭಾರತ ಕ್ರಿಕೆಟ್ ತಂಡದ ಮೌಲ್ಯವನ್ನು ಆತ ಹೆಚ್ಚಿಸುತ್ತಾನೆ. ನನ್ನ ಪ್ರಕಾರ ಆತ ಹೊಸ ಹುರುಪು ತಂದೆ ತರುತ್ತಾನೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಲೆಜಂಡರಿ ಆಟಗಾರ ಜಾಕ್ ಕಾಲಿಸ್ ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯ ಕೋಚ್ ಮಾತ್ರ ಅಧಿಕೃತವಾಗಿ ಘೋಷಣೆಯಾಗಿದ್ದು, ಉಳಿದ ಕೋಚಿಂಗ್ ಸ್ಟಾಫ್ಗೆ ಸಂಬಂಧಿಸಿದ ವಿವರಗಳು ಇನ್ನೂ ಬಾಕಿ ಉಳಿದಿವೆ. ಆದಾಗ್ಯೂ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಇದರ ನಡುವೆಯೇ ಈಗಿರುವ ಸಹಾಯಕ ಸಿಬ್ಬಂದಿಯನ್ನು ಮುಂದುವರೆಸಲು ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ.