ಬೆಂಗಳೂರು: ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅಪ್ಪನಾಗಿದ್ದಾರೆ. ಅವರ ಪತ್ನಿ ಹಾಗೂ ನಟಿ ನತಾಶಾ ಸ್ಟಾಂಕೋವಿಕ್ ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
'ನಮಗೆ ಗಂಡು ಮಗು ಜನಿಸಿದೆ' ಎಂದು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ 26 ವರ್ಷದ ಹಾರ್ದಿಕ್ ಪಾಂಡ್ಯ, ಮಗುವಿನ ಕೈ ಹಿಡಿದುಕೊಂಡಿರುವ ಚಿತ್ರವನ್ನೂ ಪ್ರಕಟಿಸಿದ್ದಾರೆ. ಅದರ ಬೆನ್ನಲ್ಲೇ ಅವರಿಗೆ ಅಭಿನಂದನೆಗಳ ಸುರಿಮಳೆ ಹರಿದಿದೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬ್ಯಾಟ್ಸ್ಮನ್ ಕೆಎಲ್ ರಾಹುಲ್, ಸ್ಪಿನ್ನರ್ ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಸುರೇಶ್ ರೈನಾ, ಆಸ್ಟ್ರೇಲಿಯಾದ ಕ್ರಿಸ್ ಲ್ಯಾನ್ ಮತ್ತು ಟೆನಿಸ್ ತಾರೆ ಸಾನಿಯಾ ಮಿರ್ಜಾ ಮುಂತಾದವರು ಹಾರ್ದಿಕ್ಗೆ ಅಭಿನಂದನೆ ತಿಳಿಸಿದ್ದಾರೆ. ಬಿಸಿಸಿಐ ಮತ್ತು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಕೂಡ ಟ್ವಿಟರ್ನಲ್ಲಿ ಅಭಿನಂದನೆ ಸಲ್ಲಿಸಿದೆ.
ಈ ವರ್ಷದ ಮೊದಲ ದಿನ ಸ್ಟಾಂಕೋವಿಕ್ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಹಾರ್ದಿಕ್ ಪಾಂಡ್ಯ, ಬಳಿಕ ಮೇನಲ್ಲಿ ಲಾಕ್ಡೌನ್ ಸಮಯದಲ್ಲಿ ತಂದೆಯಾಗುತ್ತಿರುವ ವಿಷಯವನ್ನು ಪ್ರಕಟಿಸಿ ಅಚ್ಚರಿ ಮೂಡಿಸಿದ್ದರು. ಈ ನಡುವೆ ಅವರು ಸರಳವಾಗಿ ವಿವಾಹವಾಗಿದ್ದಾರೆ ಎನ್ನಲಾಗಿದೆ. ಸೆರ್ಬಿಯಾ ಮೂಲದ ರೂಪದರ್ಶಿ ನತಾಶಾ ಸ್ಟಾಂಕೋವಿಕ್, ಕನ್ನಡದ ದನ ಕಾಯೋನು ಸಿನಿಮಾದಲ್ಲೂ ನಟಿಸಿದ್ದಾರೆ. ಹಾರ್ದಿಕ್ ಮುಂಬರುವ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯಲಿದ್ದಾರೆ.