ಕ್ರೀಡೆ

ಮಹಿಳೆಯರ ಏಕದಿನ ವಿಶ್ವಕಪ್: ಆಸೀಸ್​ ದಾಖಲೆ ಎದುರು ಮಂಕಾದ ಭಾರತ; ಸತತ 2ನೇ ಸೋಲಿನ ಶಾಕ್​

ವಿಶಾಖಪಟ್ಟಣ: ನಾಯಕಿ ಅಲಿಸ್ಸಾ ಹೀಲಿ (142 ರನ್​, 107 ಎಸೆತ, 21 ಬೌಂಡರಿ, 3 ಸಿಕ್ಸರ್​) ಶತಕದ ಅಬ್ಬರದ ಎದುರು ಮಂಕಾದ ಆತಿಥೇಯ ಭಾರತ ತಂಡ ಐಸಿಸಿ ಮಹಿಳೆಯರ ಏಕದಿನ ವಿಶ್ವಕಪ್​ನ ತನ್ನ 4ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಆಸ್ಟ್ರೆಲಿಯಾ ಎದುರು 3 ವಿಕೆಟ್​ಗಳ ವೀರೋಚಿತ ಸೋಲು ಕಂಡಿದೆ. ಟೂರ್ನಿಯಲ್ಲಿ ಮೂರನೇ ಗೆಲುವು ಕಂಡ ಆಸೀಸ್​ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡರೆ, ಸತತ 2ನೇ ಸೋಲುಂಡ ಹರ್ಮಾನ್​ಪ್ರೀತ್​ ಪಡೆಯ ಸೆಮೀಸ್​ ಹಾದಿ ಕಠಿಣಗೊಂಡಿದೆ.

ವೈಎಸ್​ಆರ್​ ರೆಡ್ಡಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕಾದಾಟದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಭಾರತಕ್ಕೆ ಸ್ಮೃತಿ ಮಂದನಾ (80 ರನ್​, 66 ಎಸೆತ, 9 ಬೌಂಡರಿ, 3 ಸಿಕ್ಸರ್​) ಹಾಗೂ ಪ್ರತಿಕಾ ರಾವಲ್​ (75 ರನ್​, 96 ಎಸೆತ, 10 ಬೌಂಡರಿ, 1 ಸಿಕ್ಸರ್​) ಉತ್ತಮ ಅಡಿಪಾಯ ಹಾಕಿದರು. 294 ರನ್​ಗಳಿಸಿ ಸುಸ್ಥಿತಿಯಲ್ಲಿದ್ದ ಭಾರತ ಅನ್ನಾಬೆಲ್​ ಸುದರ್​ಲ್ಯಾಂಡ್​ (40ಕ್ಕೆ 5) ದಾಳಿಗೆ ನಲುಗಿ 48.5 ಓವರ್​ಗಳಲ್ಲಿ 330 ರನ್​ಗಳಿಗೆ ಆಲೌಟ್​ ಆಯಿತು. ಕೊನೇ ಆರು ವಿಕೆಟ್​ಗಳನ್ನು ಕೇವಲ 36 ರನ್​ ಅಂತರದಲ್ಲಿ ಕೈಚೆಲ್ಲಿದ ನಡುವೆಯೂ ಭಾರತ ವಿಶ್ವಕಪ್​ನಲ್ಲಿ ತನ್ನ ಗರಿಷ್ಠ ಮೊತ್ತ ಪೇರಿಸಿತು. ಪ್ರತಿಯಾಗಿ ಅಲಿಸ್ಸಾ ಹೀಲಿ ಶತಕದ ಸಾಹಸದಿಂದ ಆಸ್ಟ್ರೆಲಿಯಾ 39 ಓವರ್​ಗಳಲ್ಲಿ 4 ವಿಕೆಟ್​ಗೆ 265 ರನ್​ಗಳಿಸಿ ಗೆಲುವಿನತ್ತ ಸಾಗಿತು. ಅಂತಿಮವಾಗಿ 49 ಓವರ್​ಗಳಲ್ಲಿ 7 ವಿಕೆಟ್​ಗೆ 331 ರನ್​ಗಳಿಸಿ ಮಹಿಳಾ ಏಕದಿನದಲ್ಲಿ ಗರಿಷ್ಠ ರನ್​ಗಳ ಯಶಸ್ವಿ ಚೇಸಿಂಗ್​ ನಡೆಸಿತು. ದ. ಆಫ್ರಿಕಾ ಎದುರು ಶ್ರೀಲಂಕಾ 302 ರನ್​ಗಳಿಸಿದ್ದು ಹಿಂದಿನ ದಾಖಲೆ.

ಭಾರತ: 48.5 ಓವರ್​ಗಳಲ್ಲಿ 330 (ಪ್ರತಿಕಾ 75, ಸ್ಮೃತಿ ಮಂದನಾ 80, ಹರ್ಲೀನ್​ 38, ಹರ್ಮಾನ್​ಪ್ರೀತ್​ 22, ಜೆಮೀಮಾ 33, ರಿಚಾ ಘೋಷ್​ 32, ಅಮನ್​ಜೋತ್​ 16, ದೀಪ್ತಿ 1, ಸ್ನೇಹಾ 8, ಅನ್ನಾಬೆಲ್​ 40ಕ್ಕೆ 5, ಮೂಲಿನೆಕ್ಸ್​ 75ಕ್ಕೆ 3). ಆಸ್ಟ್ರೆಲಿಯಾ: 49 ಓವರ್​ಗಳಲ್ಲಿ 7 ವಿಕೆಟ್​ಗೆ 331 (ಅಲಿಸ್ಸಾ ಹೀಲಿ 142, ಲಿಚ್ಛೀಫಿಲ್ಡ್​ 40, ಎಲ್ಲಿಸ್​ ಪೆರ್ರಿ 47*, ಬೆಥ್​ ಮೂನಿ 4, ಅನ್ನಾಬೆಲ್​ 0, ಆಶ್ಲೇ ಗಾರ್ಡನರ್​ 45, ಮೆಕ್​ಗ್ರಾತ್​ 12, ಮೂಲಿನೆಕ್ಸ್​ 18, ಕಿಮ್​ ಗಾರ್ತ್​ 14*, ಶ್ರೀ ಚರಣಿ 41ಕ್ಕೆ 3, ದೀಪ್ತಿ 52ಕ್ಕೆ2).