ಇಸ್ಲಮಾಬಾದ್: ಪಾಕಿಸ್ತಾನದ ಆಲ್ರೌಂಡರ್ ಶಾದಬ್ ಖಾನ್ ವಿರುದ್ದ ದುಬೈ ಮೂಲದ ಯುವತಿಯೋರ್ವಳು ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಶಾದಬ್ ಅವರು ವಿವಾದದ ಕೇಂದ್ರ ಬಿಂದುವಾಗಿದ್ದಾರೆ.
ದುಬೈನ ಅಶ್ರೀನಾ ಸಾಫಿಯಾ ಎಂಬುವರು ಶಾದಬ್ ತನಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ.
2019ರ ಐಸಿಸಿ ವಿಶ್ವಕಪ್ ಸಮಯದಲ್ಲಿ ಇಂಗ್ಲೆಂಡ್ನಲ್ಲಿ ತಮ್ಮಿಬ್ಬರ ಮಧ್ಯ ಸ್ನೇಹ ಬೆಳೆದಿತ್ತು. ಅದಾದ ಬಳಿಕ ಶಾದಬ್ ಕ್ರಿಕೆಟ್ ಆಡಲು ಹೋಗುವಾಗ ಅವರೊಂದಿಗೆ ಬೇರೆ ಬೇರೆ ದೇಶಗಳಿಗೆ ಹೋಗಿದ್ದೆ.
ಆದರೆ ತಾವಿಬ್ಬರೂ ಒಟ್ಟಿಗಿದ್ದ ಫೋಟೋವೊಂದನ್ನು ಪಾಕ್ ಜರ್ನಲಿಸ್ಟ್ ಒಬ್ಬರು ಕ್ಲಿಕ್ಕಿಸಿದ್ದರು. ಅದು ವೈರಲ್ ಕೂಡ ಆಗಿತ್ತು. ಅದಾದ ಬಳಿಕ ಶಾದಬ್ ನನ್ನನ್ನು ಬೆದರಿಸಲು ಪ್ರಾರಂಭಿಸಿದರು ಎಂದು ಯುವತಿ ಹೇಳಿಕೊಂಡಿದ್ದಾರೆ.
ಸಾರ್ವಜನಿಕವಾಗಿ ನಮ್ಮಿಬ್ಬರ ಸಂಬಂಧದ ಬಗ್ಗೆ ಹೇಳಬಾರದು. ನೀನು ನನ್ನ ಅಭಿಮಾನಿ ಎಂದಷ್ಟೇ ಹೇಳಬೇಕು. ಒಮ್ಮೆ ನಮ್ಮಿಬ್ಬರ ನಡುವಿನ ಸಂಬಂಧವನ್ನು ಬಹಿರಂಗ ಪಡಿಸಿದರೆ ನಿನ್ನ ಖಾಸಗಿ ಫೋಟೋಗಳನ್ನು ವೈರಲ್ ಮಾಡಿಸುತ್ತೇನೆ ಎಂದು ಶಾದಬ್ ಬೆದರಿಕೆ ಹಾಕಿದ್ದಾರೆ ಎಂದು ಇನ್ಸ್ಟಾ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಏಕದಿನ ಹಾಗೂ ಟಿ-20 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿರುವ ಶಾದಬ್ ಆಲ್ ರೌಂಡರ್ ಎನಿಸಿಕೊಂಡವರು. ಇದೀಗ ಯುವತಿಯೋರ್ವಳ ಗಂಭೀರ ಆರೋಪಕ್ಕೆ ಗುರಿಯಾಗಿದ್ದಾರೆ. (ಏಜೆನ್ಸೀಸ್)