ನವದೆಹಲಿ: ಕ್ರಿಕೆಟ್ ಮತ್ತು ಬಾಲಿವುಡ್ ನಡುವಿನ ನಂಟು ಹೊಸದಲ್ಲ. ಹಲವಾರು ಕ್ರಿಕೆಟಿಗರು ಬಾಲಿವುಡ್ ನಟಿಯರನ್ನು ಮದುವೆಯಾಗಿರುವ ದೃಷ್ಟಾಂತಗಳಿವೆ. ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ನಟಿ ಗೀತಾ ಬಾಸ್ರಾ ಜೋಡಿ ಕೂಡ ಇದರಲ್ಲಿ ಸೇರಿದ್ದಾರೆ. ಇದೀಗ 2ನೇ ಮಗುವಿನ ನಿರೀಕ್ಷೆಯಲ್ಲಿರುವ ಗೀತಾ ಬಾಸ್ರಾ, ಹರ್ಭಜನ್ ಸಿಂಗ್ ಹೇಗೆ ಮೊದಲ ನೋಟದಲ್ಲೇ ತಮಗೆ ಬೋಲ್ಡಾದರು ಎಂಬ ಬಗ್ಗೆ ವಿವರಿಸಿದ್ದಾರೆ.
‘ಹರ್ಭಜನ್ ಸಿನಿಮಾದ ಪೋಸ್ಟರ್ ಒಂದರಲ್ಲಿ ನನ್ನನ್ನು ಮೊದಲ ಬಾರಿ ನೋಡಿದ್ದರು. ಆ ಮೂಲಕ ನನ್ನನ್ನು ಇಷ್ಟ ಪಟ್ಟಿದ್ದರು. ನನ್ನ ಬಗ್ಗೆ ಕೆಲವರಲ್ಲಿ ವಿಚಾರಿಸಲು ಯತ್ನಿಸಿದ್ದರು. ನನ್ನ ವೋ ಅಜ್ನಬೀ ಹಾಡು ಬಿಡುಗಡೆಗೊಂಡ ಬಳಿಕವಂತೂ, ಯಾರೀ ಹುಡುಗಿ ಎಂಬ ಪ್ರಶ್ನೆಯೊಂದಿಗೆ ಹುಡುಕಾಟ ಆರಂಭಿಸಿದ್ದರು’ ಎಂದು ಗೀತಾ ಬಾಸ್ರಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಹರ್ಭಜನ್ ಸಿಂಗ್ ಅವರನ್ನು ಭೇಟಿಯಾಗುವ ಮೊದಲು ನಾನೆಂದೂ ಕ್ರೀಡೆಯನ್ನು ನೋಡುತ್ತಿರಲಿಲ್ಲ. ಹರ್ಭಜನ್ ಸಿಂಗ್ ಯಾರೆಂದೂ ನನಗೆ ಆಗ ಗೊತ್ತಿರಲಿಲ್ಲ ಎಂದು ಗೀತಾ ಹೇಳಿದ್ದಾರೆ. ಗೀತಾ-ಹರ್ಭಜನ್ 2015ರಲ್ಲಿ ವಿವಾಹವಾಗಿದ್ದರು. ಅದಕ್ಕೆ ಮುನ್ನ 5 ವರ್ಷಗಳ ಕಾಲ ಡೇಟಿಂಗ್‌ನಲ್ಲಿದ್ದರು. 2016ರಲ್ಲಿ ಅವರಿಗೆ ಮಗಳು ಹಿನಾಯ ಜನಿಸಿದ್ದಳು. ದಂಪತಿ ಜುಲೈನಲ್ಲಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.