ಕ್ರೀಡೆ

ಗಂಭೀರ್​ ಈಗಲೂ ಮುಗ್ಧ ಮಗುವಿನಂತೆ… ಟೀಕೆಗಳ ಮಧ್ಯೆ ಗೌತಿ ಪರ ಬ್ಯಾಟ್ ಬೀಸಿದ ಸಂಜಯ್ ಭಾರದ್ವಾಜ್

ನವದೆಹಲಿ: ಐಸಿಸಿ ಟಿ20 ವಿಶ್ವಕಪ್ 2024ರ ಟೂರ್ನಿ ಮುಗಿಯುತ್ತಿದ್ದಂತೆ ರಾಹುಲ್ ದ್ರಾವಿಡ್​ ಅವರ ಕೋಚ್ ಅವಧಿ ಕೂಡ ಅಂತ್ಯಗೊಂಡಿತು. ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಘೋಷಿಸಿದ ದ್ರಾವಿಡ್​ ಅವರಿಗೆ ವಿಶ್ವವ್ಯಾಪಿ ವಿಶೇಷ ಗೌರವ, ಅಭಿನಂದನೆಗಳು ಹರಿದುಬಂದಿತು. ಕೋಚ್ ಹುದ್ದೆಯಿಂದ ರಾಹುಲ್ ಕೆಳಗಿಳಿಯುತ್ತಿದ್ದಂತೆ ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಅಧಿಕಾರ ಸ್ವೀಕರಿಸಿರುವ ಗೌತಮ್ ಗಂಭೀರ್​, ಪ್ರಸ್ತುತ ಶ್ರೀಲಂಕಾ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಗೆಲುವಿನೆಡೆಗೆ ಕೊಂಡ್ಯೊಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಒಂದೆಡೆ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮೂಲಕ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ಇದೀಗ ಏಕದಿನ ಸರಣಿಯಲ್ಲಿ ಭಾಗಿಯಾಗಿದೆ. ಇನ್ನು ನಿನ್ನೆಯಷ್ಟೇ ಎರಡನೇ ಮ್ಯಾಚ್​ನಲ್ಲಿ ಸೋತ ಕ್ಯಾಪ್ಟನ್ ರೋಹಿತ್ ಶರ್ಮ ಪಡೆ, ಲಂಕಾ ಬೌಲರ್​ಗಳ ದಾಳಿಗೆ ತತ್ತರಿಸಿ, 32 ರನ್​ಗಳಿಂದ ಸೋಲಿಗೆ ಶರಣಾಯಿತು. ಮೊದಲ ಪಂದ್ಯವು ಟೈ ಆದ್ದರಿಂದ ಎರಡನೇ ಪಂದ್ಯದ ಮೇಲೆ ಭಾರೀ ನಿರೀಕ್ಷೆ ಇತ್ತು. ಆದರೆ, ಶ್ರೀಲಂಕಾ ವೇಗಿಗಳ ದಾಳಿಗೆ ನಲುಗಿದ ಟೀಮ್ ಇಂಡಿಯಾ ಬ್ಯಾಟರ್​ಗಳು 241 ರನ್​ ಗುರಿಯನ್ನು ತಲುಪುವಲ್ಲಿ ಮುಗ್ಗರಿಸಿದರು.

ಈ ಸೋಲಿನ ಬೆನ್ನಲ್ಲೇ ಕೆಲವರು ತಂಡದ ಹೆಡ್ ಕೋಚ್ ಆಗಿರುವ ಗೌತಮ್ ಗಂಭೀರ್​ರನ್ನು ಟೀಕಿಸಿದ್ದು, ಶ್ರೀಲಂಕಾ ಪಡೆಯನ್ನು ಮಣಿಸುವಲ್ಲಿ ಭಾರತ ವಿಫಲವಾಗಿದ್ಯಾಕೆ? ಎಂದು ಪ್ರಶ್ನಿಸಿದರು. ಇದೆಲ್ಲದರ ನಡುವೆ ನೆಟ್ಟಿಗರು ಗೌತಿ ಸಿಡಿಮಿಡಿಗೊಳ್ಳುವ ಮನುಷ್ಯ, ಆತ ಮುಂಗೋಪಿ ಎಂದು ಅಭಿಪ್ರಾಯಿಸಿದ್ದರು. ಇನ್ನು ಗಂಭೀರ್​ ಕೆಲಸವನ್ನು ಪ್ರಶ್ನಿಸಿದ ಮಾಜಿ ಆಟಗಾರರಾದ ಸಬಾ ಕರೀಮ್ ಮತ್ತು ಅಜಯ್ ಜಡೇಜಾ ಒಂದಷ್ಟು ಪ್ರಶ್ನೆಗಳನ್ನು ಸಹ ಮುಂದಿಟ್ಟರು. ಸದ್ಯ ಈ ಎಲ್ಲಾ ಬೆಳವಣಿಗೆ ಗಮನಿಸಿದ ಗೌತಿ ಬಾಲ್ಯದ ಕೋಚ್ ಸಂಜಯ್ ಭಾರದ್ವಾಜ್ ಮಾತನಾಡಿ, ಎಲ್ಲರಂತಲ್ಲ ಗೌತಮ್ ಎಂದು ಹೇಳಿದ್ದಾರೆ.

"ಗೌತಮ್ ಎಲ್ಲರಂತೆ ಕೆಲಸ ಮಾಡುವುದಿಲ್ಲ. ಅನ್ಯರಿಗಿಂತ ಆತ ಭಿನ್ನ. ಈ ಹಂತದಲ್ಲಿ ಟೆಕ್ನಿಕಲ್ ಬೆಳವಣಿಗೆ ಅವಶ್ಯಕತೆ ಇಲ್ಲ ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ತಂಡದ ಆಟಗಾರರನ್ನು ಪ್ರೇರೇಪಿಸುವುದು ಮತ್ತು ಅವರಿಗೆ ಆತ್ಮವಿಶ್ವಾಸವನ್ನು ತುಂಬುವ ಕಾರ್ಯ ಗೌತಿ ಅವರದ್ದು. ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು 3-0 ಅಂತರದಿಂದ ಗೆದ್ದಿರುವುದು ಕೋಚ್ ಆಗಿರುವ ಗೌತಮ್​ಗೆ ಒಂದೊಳ್ಳೆ ಸ್ಟಾರ್ಟ್"​ ಎಂದರು.

"ನೀವಂದುಕೊಂಡಂತೆ ಗಂಭೀರ್ ಕೋಪಿಷ್ಠ ಅಲ್ಲ. ಆತ ಈಗಲೂ ಮುಗ್ಧ ಮಗುವಿನಂತೆ. ಮಗು ಮನಸ್ಥಿತಿಯ ವ್ಯಕ್ತಿ. ಆಗ ಒಂದು ಪಂದ್ಯ ಸೋತರೆ ಸಾಕು ಗಂಭೀರ್ ಕಣ್ಣೀರಿಡುತ್ತಿದ್ದರು. ಗೆಲುವಿನತ್ತ ಗುರಿಯಿಡುತ್ತಿದ್ದ ಗೌತಿ, ಎಂದಿಗೂ ಸೋಲನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಮ್ಯಾಚ್ ಸೋತಾಗಲೆಲ್ಲಾ ಭಾವುಕರಾಗುತ್ತಿದ್ದರು. ಇಂದಿಗೂ ಅವರು ಮಕ್ಕಳಂತೆಯೇ ಇದ್ದಾರೆ. ಇದು ಜನರಿಗೆ ಅರ್ಥವಾಗುವುದಿಲ್ಲ" ಎಂದರು,(ಏಜೆನ್ಸೀಸ್).