ಆಸ್ಟ್ರೇಲಿಯಾ ಗೆಲುವಿನ ಸಂಭ್ರಮ ಏಜೆನ್ಸಿ
ಕ್ರೀಡೆ

ಡರ್ಬನ್​ ಟೆಸ್ಟ್​ನಲ್ಲಿ ಆಸ್ಟ್ರೆಲಿಯಾಕ್ಕೆ ಗೆಲುವಿನ ಜೋಶ್​

ಪ್ಯಾಟ್​ ಕಮ್ಮಿನ್ಸ್​ ಪಡೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಡರ್ಬನ್​: ವೇಗಿ ಜೋಶ್​ ಹ್ಯಾಸಲ್​ವುಡ್​ (49ಕ್ಕೆ 6) ಪ್ರದರ್ಶಿಸಿದ ಜೀವನಶ್ರೇಷ್ಠ ಬೌಲಿಂಗ್​ ನಿರ್ವಹಣೆಯ ಬಲದಿಂದ ಆಸ್ಟ್ರೆಲಿಯಾ ತಂಡ ಆತಿಥೇಯ ಹಾಗೂ ವಿಶ್ವ ಚಾಂಪಿಯನ್​ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ 214 ರನ್​ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಪ್ಯಾಟ್​ ಕಮ್ಮಿನ್ಸ್​ ಪಡೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಕಿಂಗ್ಸ್​ಮೀಡ್​ನಲ್ಲಿ ಮಂಗಳವಾರ ಮುಕ್ತಾಯಗೊಂಡ ಪಂದ್ಯದಲ್ಲಿ, 421 ರನ್​ ಸವಾಲಿಗೆ ಪ್ರತಿಯಾಗಿ 4 ವಿಕೆಟ್​ಗೆ 102 ರನ್​ಗಳಿಂದ 5ನೇ ಹಾಗೂ ಅಂತಿಮ ದಿನದಾಟ ಆರಂಭಿಸಿದ ದ. ಆಫ್ರಿಕಾ, ಭೋಜನ ವಿರಾಮದ ಬಳಿಕ 86.5 ಓವರ್​ಗಳಲ್ಲಿ 206 ರನ್​ಗಳಿಗೆ ಆಲೌಟ್​ ಆಯಿತು. ಏಡನ್​ ಮಾರ್ಕ್ರಮ್​ (75) ಹೋರಾಟ ಹರಿಣಗಳ ಸೋಲಿನ ಅಂತರವನ್ನಷ್ಟೇ ತಗ್ಗಿಸಿತು. ಆಸೀಸ್​ 2ನೇ ಹೊಸ ಚೆಂಡು ತೆಗೆದುಕೊಂಡ ಬಳಿಕ ಟೆಂಬಾ ಬವುಮಾ ಪಡೆ 5 ರನ್​ ಅಂತರದಲ್ಲಿ ಕೊನೇ 4 ವಿಕೆಟ್​ ಕಳೆದುಕೊಂಡು ಶರಣಾಯಿತು. ಸರಣಿಯ 2ನೇ ಪಂದ್ಯ ಅಕ್ಟೋಬರ್​ 18ರಿಂದ ಗೆರ್ಬಹದಲ್ಲಿ ನಡೆಯಲಿದೆ. ಹ್ಯಾಸಲ್​ವುಡ್​ ಟೆಸ್ಟ್​ನಲ್ಲಿ 15ನೇ ಬಾರಿ 5 ವಿಕೆಟ್​ ಗೊಂಚಲು ಪಡೆದರು.

ಆಸ್ಟ್ರೆಲಿಯಾ: 390 ಮತ್ತು 6 ವಿಕೆಟ್​ಗೆ 314 ಡಿಕ್ಲೇರ್​, ದಕ್ಷಿಣ ಆಫ್ರಿಕಾ: 284 ಮತ್ತು 86.5 ಓವರ್​ಗಳಲ್ಲಿ 206 (ಮಾರ್ಕ್ರಮ್​ 76, ಮುಲ್ಡರ್​ 29, ಯಾನ್ಸೆನ್​ 35, ಹ್ಯಾಸಲ್​ವುಡ್​ 49ಕ್ಕೆ 6, ರೆನ್​ಶಾ 30ಕ್ಕೆ 2, ಸ್ಟಾರ್ಕ್​ 33ಕ್ಕೆ 1, ಕಮ್ಮಿನ್ಸ್​ 34ಕ್ಕೆ 1), ಪಂದ್ಯಶ್ರೇಷ್ಠ: ಮ್ಯಾಟ್​ ರೆನ್​ಶಾ.