ಮೆಲ್ಬೋರ್ನ್: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಬಿರುಸಿನ ಬ್ಯಾಟಿಂಗ್ ಮೂಲಕ ತಂಡಕ್ಕೆ ಆರಂಭಿಕ ಹಂತದಲ್ಲಿ ಪ್ರಮುಖ ಆಸ್ತಿಯಾಗಿದ್ದಾರೆ. ಅದರಲ್ಲೂ ಟಿ20 ಕ್ರಿಕೆಟ್‌ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಗಮನಸೆಳೆಯುವ ಬ್ಯಾಟ್ಸ್‌ಮನ್. 2018ರಲ್ಲಿ ನಡೆದ ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ ಶಿಕ್ಷೆ ಅನುಭವಿಸಿ ವಾಪಸ್ ಬಂದ ಬಳಿಕವೂ ವಾರ್ನರ್ ಅಬ್ಬರದ ಇನ್ನು ಹೆಚ್ಚಾಗಿಯೇ ಇದೆ. ಆಸ್ಟ್ರೇಲಿಯಾದ ಕೋಚ್ ಜಸ್ಟಿನ್ ಲ್ಯಾಂಗರ್, ವಾರ್ನರ್ ಅವರನ್ನು ಖ್ಯಾತ ಬಾಕ್ಸರ್ ಫ್ಲಾಯ್ಡ್ ಮೇವೆದರ್‌ಗೆ ಹೋಲಿಸಿದ್ದಾರೆ.
2018ರ ಮಾರ್ಚ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಂದಿನ ನಾಯಕ ಸ್ಟೀವನ್ ಸ್ಮಿತ್, ಉಪ ನಾಯಕ ಡೇವಿಡ್ ವಾರ್ನರ್ ಹಾಗೂ ಕ್ಯಾಮರೂನ್ ಬ್ಯಾನ್‌ಕ್ರ್ಯಾಫ್ಟ್ ಅವರನ್ನು ಒಂದು ವರ್ಷ ನಿಷೇಧ ಹೇರಲಾಗಿತ್ತು. ಈ ಪ್ರಕರಣದಿಂದ ಮುಜುಗರಗೊಂಡ ಅಂದಿನ ಕೋಚ್ ಡರೇನ್ ಲೆಹಮನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಲ್ಯಾಂಗರ್ ತಂಡದ ಕೋಚ್ ಆಗಿ ನೇಮಕವಾದರು.