ಕ್ರೀಡೆ

ಹ್ಯಾಟ್ರಿಕ್ ಜಯದ ಹಂಬಲದಲ್ಲಿ ಕಿರಿಯರು: 19 ವಯೋಮಿತಿ ವಿಶ್ವಕಪ್‌ನಲ್ಲಿ ಭಾರತ-ಅಮೆರಿಕ ಕಾದಾಟ

ಬ್ಲೋಮಾಂಟೇನ್: ಸೂಪರ್-6 ಸ್ಥಾನ ಖಚಿತಪಡಿಸಿಕೊಂಡಿರುವ ಐದು ಬಾರಿಯ ಚಾಂಪಿಯನ್ ಭಾರತ ತಂಡ ಐಸಿಸಿ 19 ವಯೋಮಿತಿಯ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ತನ್ನ ಮೂರನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಭಾನುವಾರ ಅಮೆರಿಕ ತಂಡದ ಸವಾಲು ಎದುರಿಸಲಿದ್ದು, ಗೆಲುವಿನ ಓಟವನ್ನು ವಿಸ್ತರಿಸುವ ವಿಶ್ವಾಸದಲ್ಲಿದೆ.

ಆಡಿರುವ ಎರಡು ಪಂದ್ಯಗಳಲ್ಲಿ ಗೆದ್ದು ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಭಾರತ ಕಿರಿಯರ ತಂಡಕ್ಕೆ ಈ ಪಂದ್ಯ ಮುಂದಿನ ಸುತ್ತಿಗೆ ಆತ್ಮವಿಶ್ವಾಸ ಹೆಚ್ಚಿಸಲು ನೆರವಾಗಲಿದೆ. ಭಾರತೀಯ ಮೂಲದ ಆಟಗಾರರಿಂದ ಕೂಡಿರುವ ಅಮೆರಿಕ ತಂಡ ಆಡಿರುವ 2 ಪಂದ್ಯಗಳಲ್ಲೂ ಸೋಲುಂಡಿದೆ. ಅಂತಿಮ ಪಂದ್ಯದಲ್ಲಿ ಪ್ರತಿಷ್ಠೆಗೆ ಆಡಲಿದೆ. ನಾಲ್ಕು ಗುಂಪಿನ ಅಗ್ರ ಮೂರು ತಂಡಗಳು ಸೂಪರ್-6ಗೆ ಅರ್ಹತೆ ಪಡೆಯಲಿವೆ. ನಾಯಕ ಉದಯ್ ಸಹಾರನ್ ಸತತ ಎರಡು ಅರ್ಧಶತಕಗಳ ಮೂಲಕ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದು, ಮುಶೀರ್ ಖಾನ್, ಸಚಿನ್ ದಾಸ್ ಉತ್ತಮ ಾರ್ಮ್‌ನಲ್ಲಿದ್ದಾರೆ.

ಆರಂಭ: ಮಧ್ಯಾಹ್ನ 1.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್