Rohit Sharma : ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ ಅವರ ಫಿಟ್ನೆಸ್ ಅನ್ನು ಟೀಕಿಸುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡು ಭಾರೀ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್, ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಭರ್ಜರಿ ಜಯ ದಾಖಲಿಸಿದ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಗೆ ಅಭಿನಂದನೆ ಸಲ್ಲಿಸಿ, ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಮೂಲಕ ವಿವಾದಕ್ಕೆ ತೆರೆಎಳೆದಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಟ್ರೋಫಿ ಜಯಗಳಿಸಿದ ಬೆನ್ನಲ್ಲೇ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಶಮಾ ಮೊಹಮ್ಮದ್, ರೋಹಿತ್ ಶರ್ಮಾ ಅವರ 76 ರನ್‌ಗಳ ಇನ್ನಿಂಗ್ಸ್ ಅನ್ನು ಶ್ಲಾಘಿಸಿದರು. ಈ ಅಮೋಘ ಆಟದಿಂದಾಗಿ 12 ವರ್ಷಗಳ ನಂತರ ಮೆನ್ ಇನ್ ಬ್ಲೂ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲಲು ಕಾರಣವಾಯಿತು ಎಂದರು. ಭಾರತದ ಇನ್ನಿಂಗ್ಸ್‌ನಲ್ಲಿ ನಿರ್ಣಾಯಕ ಪ್ರದರ್ಶನ ನೀಡಿದ್ದಕ್ಕಾಗಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್. ರಾಹುಲ್ ಅವರನ್ನು ಶಮಾ ಶ್ಲಾಘಿಸಿದರು.
ಮಾರ್ಚ್ 3 ರಂದು ಶಮಾ ಮೊಹಮ್ಮದ್ ಒಂದು ಟ್ವೀಟ್ ಮಾಡಿದ್ದರು. ಅದರಲ್ಲಿ ಅವರು ರೋಹಿತ್ ಶರ್ಮ ಅವರನ್ನು ಉದ್ದೇಶಿಸಿ ಓರ್ವ ದಡೂತಿ ಕ್ರಿಕೆಟಿಗ ಮತ್ತು ಭಾರತದ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಪ್ರಭಾವಶಾಲಿಯಲ್ಲದ ನಾಯಕ ಎಂದು ಟೀಕಿಸಿದ್ದರು. ಯಾವಾಗ ಈ ಪೋಸ್ಟ್ ವೈರಲ್ ಆಯ್ತೋ ದೊಡ್ಡ ವಿವಾದವೇ ಸೃಷ್ಟಿಯಾಯ್ತು. ತೀವ್ರ ಟೀಕೆ ಎದುರಿಸಿದ ಶಮಾ, ಕೊನೆಗೆ ಆ ಪೋಸ್ಟ್ ಅನ್ನೇ ಡಿಲೀಟ್ ಮಾಡಿದರು.
ಶಮಾ ಮೊಹಮ್ಮದ್ ಅವರ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿತು, ಕಾಂಗ್ರೆಸ್ "ಬಾಡಿ ಶೇಮಿಂಗ್" ಮತ್ತು ವಿಶ್ವಕಪ್ ವಿಜೇತರನ್ನು ಅಗೌರವಿಸಿದೆ ಎಂದು ಆರೋಪಿಸಿತು. ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರು ಶಮಾ ಹೇಳಿಕೆಯನ್ನು ಸಂಪೂರ್ಣವಾಗಿ ಖಂಡಿಸಿದರು. ಆದರೆ, ಶಮಾ ಮೊಹಮ್ಮದ್ ಮಾತ್ರ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ತಾನು ಮಾಡಿರುವ ಟ್ವೀಟ್ ಓರ್ವ ಕ್ರೀಡಾಪಟುವಿನ ಫಿಟ್ನೆಸ್ ಬಗ್ಗೆ ಸಾಮಾನ್ಯ ಅವಲೋಕನವಾಗಿದೆಯೇ ಹೊರತು ದೇಹವನ್ನು ಅವಮಾನಿಸುವ ಉದಾಹರಣೆಯಲ್ಲ ಎಂದು ಹೇಳಿದರು.
ಶಮಾ ಮೊಹಮ್ಮದ್ ಅವರ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿತು. ಅಲ್ಲದೆ, ಶಮಾ ವಿರುದ್ಧ ಸ್ವತಃ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೇ ಅಸಮಾಧಾನ ಹೊರಹಾಕಿದರು. ವಿವಾದ ಆಗುತ್ತಿದ್ದಂತೆ ಸ್ಪಷ್ಟನೆ ನೀಡಿದ ಕಾಂಗ್ರೆಸ್, ನಮ್ಮ ಪಕ್ಷವು ಕ್ರೀಡಾ ದಿಗ್ಗಜರ ಕೊಡುಗೆಗಳ ಬಗ್ಗೆ ಅತ್ಯುನ್ನತ ಗೌರವವನ್ನು ಹೊಂದಿದೆ ಎಂದು ಹೇಳಿತು. ಕೊನೆಗೆ ಈ ವಿವಾದ ತಣ್ಣಗಾಯಿತು. ಇದೀಗ ಶಮಾ ಅವರು ರೋಹಿತ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು, ವಿವಾದಕ್ಕೆ ಪೂರ್ಣ ವಿರಾಮ ಬಿದ್ದಂತಾಗಿದೆ.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಎಂಟು ವರ್ಷಗಳ ಬಳಿಕ ಪುನರಾರಂಭಗೊಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ಭಾರತ ತಂಡ ಅಜೇಯವಾಗಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ನಾಯಕ ರೋಹಿತ್ ಶರ್ಮ (76 ರನ್, 83 ಎಸೆತ, 7 ಬೌಂಡರಿ, 3 ಸಿಕ್ಸರ್) ಬಿರುಸಿನ ಆಟ ಹಾಗೂ ನಾಲ್ವರು ಸ್ಪಿನ್ನರ್‌ಗಳ ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು 4 ವಿಕೆಟ್‌ಗಳ ರೋಚಕ ಗೆಲುವು ಒಲಿಸಿಕೊಂಡಿದೆ. ಇದರೊಂದಿಗೆ ರೋಹಿತ್ ಶರ್ಮ ಸಾರಥ್ಯದಲ್ಲಿ 12 ವರ್ಷಗಳ ಬಳಿಕ ಭಾರತ ತಂಡ ‘ಮಿನಿ ವಿಶ್ವಕಪ್’ ಗೆದ್ದುಕೊಂಡಿದೆ. ಒಟ್ಟಾರೆ ಮೂರನೇ ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ, ಈ ಸಾಧನೆ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ರೋಹಿತ್ ಶರ್ಮ ಕಾಂಬಿನೇಷನ್‌ನಲ್ಲಿ ಗೆದ್ದ ಮೊದಲ ಐಸಿಸಿ ಟೂರ್ನಿ ಇದಾಗಿದೆ.
ದುಬೈ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರಶಸ್ತಿ ಕಾದಾಟದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತೀಯ ಸ್ಪಿನ್ನರ್‌ಗಳ ಕಡಿವಾಣದ ನಡುವೆ ಬ್ಯಾಟರ್ ಡೆರಿಲ್ ಮಿಚೆಲ್ (63 ರನ್, 101 ಎಸೆತ, 3 ಬೌಂಡರಿ) ಹಾಗೂ ಮಿಚೆಲ್ ಬ್ರೇಸ್‌ವೆಲ್ (53* ರನ್, 40 ಎಸೆತ, 3 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ನೆರವಿನಿಂದ ನ್ಯೂಜಿಲೆಂಡ್ 7 ವಿಕೆಟ್‌ಗೆ 251 ರನ್‌ಗಳ ಪೈಪೋಟಿಯುತ ಮೊತ್ತ ಕಲೆಹಾಕಿತು. ಪ್ರತಿಯಾಗಿ ರೋಹಿತ್ ಶರ್ಮ ಹಾಗೂ ಶುಭಮಾನ್ ಗಿಲ್ (31) ಒದಗಿಸಿದ ಬಿರುಸಿನ ಆರಂಭದ ನಡುವೆಯೂ 17 ರನ್‌ಗಳ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಶ್ರೇಯಸ್ ಅಯ್ಯರ್ (48 ರನ್, 62 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ಆಲ್ರೌಂಡರ್ ಅಕ್ಷರ್ ಪಟೇಲ್ (29) ಚೇಸಿಂಗ್ ಜೀವಂತವಿಟ್ಟರು. ಕೊನೆಯಲ್ಲಿ ಕನ್ನಡಿಗ ಕೆಎಲ್ ರಾಹುಲ್ (34* ರನ್, 33 ಎಸೆತ, 1 ಬೌಂಡರಿ, 1 ಸಿಕ್ಸರ್) ಉಪಯುಕ್ತ ಆಟದ ನೆರವಿನಿಂದ 49 ಓವರ್‌ಗಳಲ್ಲಿ 6 ವಿಕೆಟ್‌ಗೆ 254 ಭಾರತಕ್ಕೆ ಗೆಲುವು ತಂದುಕೊಟ್ಟರು. ಕೊನೆಯವರೆಗೂ ಪಂದ್ಯದಲ್ಲಿ ಹೋರಾಡಿದ ನ್ಯೂಜಿಲೆಂಡ್ ರನ್ನರ್ ಅಪ್‌ಗೆ ಸಮಾಧಾನ ಕಂಡಿದೆ. (ಏಜೆನ್ಸೀಸ್)