ಪುಣೆ: ಶಿವಂ ಮತ್ತು ಮೊಹಮ್ಮದ್ರಜಾ ಅವರ ಹೊಣೆಗಾರಿಕೆಯುತ ಆಟದೊಂದಿಗೆ ಪಂದ್ಯದ ಉಭಯ ಅವಧಿಗಳಲ್ಲಿ ಸಾಂಘಿಕ ಪ್ರದರ್ಶನ ನೀಡಿದ ಹರಿಯಾಣ ಸ್ಟೀಲರ್ಸ್ ತಂಡ ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ ಫೈನಲ್ ನಲ್ಲಿ ಪಟನಾ ಪೈರೇಟ್ಸ್ ತಂಡವನ್ನು9 ಅಂಕಗಳಿಂದ ಸೋಲಿಸಿ ಚೊಚ್ಚಲ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಬಾಳೇವಾಡಿ ಕ್ರೀಡಾ ಸಂಕೀರ್ಣದಲ್ಲಿ ಭಾನುವಾರ ನಡೆದ ಫೈನಲ್ ಹಣಾಹಣಿಯಲ್ಲಿ 32-23 ಅಂಕಗಳ ಅಂತರದಿಂದ ಪೈರೇಟ್ಸ್ ತಂಡದ ಸವಾಲನ್ನು ಹತ್ತಿಕ್ಕುವ ಮೂಲಕ ನೂತನ ಚಾಂಪಿಯನ್ ಆಗಿ ವಿಜಯೋತ್ಸವ ಆಚರಿಸಿತು.
ಲೀಗ್ ನ ಐದನೇ ಆವೃತ್ತಿಯಲ್ಲಿ ಪದಾರ್ಪಣೆ ಮಾಡಿದ ಹರಿಯಾಣ, 11ನೇ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಕಳೆದ ಬಾರಿಯ ಫೈನಲ್ ನಲ್ಲಿ ಪಟನಾ ಪೈರೇಟ್ಸ್ ತಂಡದ ವಿರುದ್ಧ 25-28ರಲ್ಲಿ ಸೋತಿದ್ದ ಹರಿಯಾಣ ತಂಡವು, ಈ ಬಾರಿ ಪ್ರಶಸ್ತಿ ಗೆದ್ದು ಬೀಗಿತು. ಇದರೊಂದಿಗೆ ಸುಮಾರು ಎರಡೂವರೆ ತಿಂಗಳು ಮೂರು ಸ್ಥಳಗಳಲ್ಲಿ ನಡೆದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಅಭಿಯಾನಕ್ಕೆ ತೆರೆ ಬಿದ್ದಿತು. ಅತ್ತ 3, 4 ಮತ್ತು 5ನೇ ಆವೃತ್ತಿಯ ಚಾಂಪಿಯನ್ ಪಟನಾ ಪೈರೇಟ್ಸ್ ನಾಲ್ಕನೇ ಬಾರಿ ಫೈನಲ್ ತಲುಪಿತ್ತು. ಆದರೆ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲಗೊಂಡು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.
ಹರಿಯಾಣ ಸ್ಟೀಲರ್ಸ್ ಪರ ಶಿವಂ, ಮೊಹಮ್ಮದ್ರಜಾ ಮತ್ತು ವಿನಯ್ ಕ್ರಮವಾಗಿ 9, 7 ಮತ್ತು 6 ಅಂಕ ಗಳಿಸಿ ಜಯದಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಅತ್ತ ಪಟನಾ ತಂಡದ ಪರ ದೇವಾಂಕ ಮತ್ತು ಗುರ್ ದೀಪ್ ಕ್ರಮವಾಗಿ 5 ಮತ್ತು 6 ಅಂಕಗಳನ್ನು ಗಳಿಸಿ ತಂಡದ ಹೋರಾಟಕ್ಕೆ ಸಾಕ್ಷಿಯಾದರು. ಪಂದ್ಯ ಮುಕ್ತಾಯಕ್ಕೆ 8 ಅಂಕಗಳ (27-19) ಅಂತರ ಕಾಯ್ದುಕೊಂಡ ಹರಿಯಾಣ, ಮೊದಲ ಸಲ ಟ್ರೋಫಿ ಎತ್ತಿಹಿಯುವ ವೇದಿಕೆಯತ್ತ ಮಹತ್ವದ ದಾಪುಗಾಲಿಟ್ಟಿತು.
31 ಮತ್ತು 31ನೇ ನಿಮಿಷದಲ್ಲಿ ಲಭಿಸಿದ ಡು ಆರ್ ಡೈ ಅವಕಾಶದ ರೇಡಿಂಗ್ ಮತ್ತು ಟ್ಯಾಕಲ್ ಮಿಂಚಿದ ಹರಿಯಾಣ ತಂಡದ ಮುನ್ನಡೆಯನ್ನು 21-16ಕ್ಕೆ ಹಿಗ್ಗಿಸಿಕೊಂಡಿತು. 33ನೇ ನಿಮಿಷದಲ್ಲಿ ಮೀತು ಅವರನ್ನು ಟ್ಯಾಕಲ್ ಮಾಡಿದ ಸಂಜಯ್, ಪಂದ್ಯದಲ್ಲಿ ಮೊದಲ ಸಲ ಪಟನಾ ಪೈರೇಟ್ಸ್ ತಂಡವನ್ನು ಆಲೌಟ್ ಮಾಡಿತು. ಇದು ಹರಿಯಾಣ ಸ್ಟೀಲರ್ಸ್ ತಂಡದ ಅಂತರವನ್ನು 27-18ಕ್ಕೆ ಹಿಗ್ಗಿಸಿತು. ಇದರಿಂದ ಒತ್ತಡಕ್ಕೆ ಒಳಗಾದ ಪಟನಾ ಪೈರೇಟ್ಸ್ ಪುಟಿದೇಳುವ ಆತುರದಲ್ಲಿ ಪದೇ ಪದೇ ತಪ್ಪುಗಳನ್ನು ಎಸಗಿದ್ದು, ಹರಿಯಾಣ ತಂಡದ ಪ್ರಭುತ್ವಕ್ಕೆ ನೆರವಾಯಿತು.
ದ್ವಿತೀಯಾರ್ಧ ಆರಂಭವಾಗುತ್ತಿದ್ದಂತೆಯೇ ಪಟನಾ ಪೈರೇಟ್ಸ್ ಹಿನ್ನಡೆ ತಗ್ಗಿಸುವ ನಿಟ್ಟಿನಲ್ಲಿ ಸಂಘಟಿತ ಹೋರಾಟಕ್ಕೆ ಒತ್ತು ನೀಡಿತು. ಇದರ ಫಲವಾಗಿ 15-17ರಲ್ಲಿ ಪ್ರತಿರೋಧ ನೀಡಿತು. ರಕ್ಷಣಾತ್ಮಕ ಆಟಕ್ಕೆ ಎರಡೂ ತಂಡಗಳು ಮುಂದಾದ ಕಾರಣ ಪಂದ್ಯ ಮತ್ತಷ್ಟು ತೀವ್ರತೆ ಪಡೆಯಿತು. ಎರಡೂ ತಂಡಗಳು 20ರಿಂದ 30 ನಿಮಿಷಗಳ ಅಂತರದಲ್ಲಿ ತಲಾ 4 ಅಂಕಗಳನ್ನು ಗಳಿಸಲಷ್ಟೇ ಶಕ್ತಗೊಂಡವು. ತಲಾ 3 ಅಂಕಗಳು ಟ್ಯಾಕಲ್ ನಲ್ಲಿ ಬಂದಿದ್ದು, ಇತ್ತಂಡಗಳ ಆದ್ಯೆತೆಯನ್ನು ಬಿಂಬಿಸಿತು. 30 ನಿಮಿಷಗಳ ಅಂತ್ಯಕ್ಕೆ ಹರಿಯಾಣ ಸ್ಟೀಲರ್ಸ್ ತಂಡ 19-16ರಲ್ಲಿ ಅಂತರ ಕಾಯ್ದುಕೊಳ್ಳುವುದರೊಂದಿಗೆ ಮುಂದಿನ ಅವಧಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತು.
ಪಟನಾ ಪೈರೇಟ್ಸ್ ತಂಡದ ದಿಟ್ಟ ಹೋರಾಟದ ನಡುವೆಯೂ ಶಿವಂ ಪತಾರೆ ಅವರ ಅದ್ಭುತ ಆಟದಿಂದ ಮಿಂಚಿದ ಹರಿಯಾಣ ಸ್ಟೀಲರ್ಸ್ ತಂಡ ಪಂದ್ಯದ ಮೊದಲಾರ್ಧಕ್ಕೆ 15-12 ಅಂಕಗಳಿಂದ ಮೇಲುಗೈ ಸಾಧಿಸಿತು.
ಮೊದಲ ಎರಡು ನಿಮಿಷಗಳಲ್ಲಿ 2-0 ಅಂತರದ ಮುನ್ನಡೆ ಕಂಡುಕೊಂಡ ಹರಿಯಾಣ, 5 ನಿಮಿಷಗಳ ಆಟಕ್ಕೆ 4-3ರಲ್ಲಿ ಪ್ರತಿರೋಧ ಎದುರಿಸಿತು. ಗುರ್ ದೀಪ್ ಸಿಂಗ್ ಅವರ ದಿಟ್ಟ ಆಟದಿಂದ ಪಟನಾ ಪ್ರತಿರೋಧ ಒಡ್ಡುವ ಪ್ರಯತ್ನ ನಡೆಸಿತು.
ರೇಡಿಂಗ್ ಮತ್ತು ಟ್ಯಾಕಲ್ ಎರಡರಲ್ಲೂ ಮಿಂಚಿದ ಉಭಯ ತಂಡಗಳು 11ನೇ ನಿಮಿಷಕ್ಕೆ7-6 ಜಿದ್ದಾಜಿದ್ದಿನ ಹೋರಾಟ ಸಂಘಟಿಸಿದವು. ಈ ಮಧ್ಯೆ ಪಟನಾ ಪೈರೇಟ್ಸ್ ತಂಡ ಪಂದ್ಯದಲ್ಲಿ ಮೊದಲ ಸಲ 8-8ರಲ್ಲಿ ಸಮಬಲದ ಹೋರಾಟ ತೋರಿತು. ಮತ್ತೆ ಮೇಲುಗೈ ಸಾಧಿಸಿದ ಹರಿಯಾಣ ತಂಡವು 15ನೇ ನಿಮಿಷಕ್ಕೆ 12-9ರಲ್ಲಿ ಅಂತರ ಕಾಯ್ದುಕೊಳ್ಳುವ ಮೂಲಕ ಎದುರಾಳಿ ತಂಡದ ಮೇಲೆ ಒತ್ತಡ ಹೇರಿತು.