ಕ್ರೀಡೆ

ಪಿಂಕ್​ಬಾಲ್​ ಅಭ್ಯಾಸ ಪಂದ್ಯದಲ್ಲಿ ಮಿಂಚಿದ ಹರ್ಷಿತ್ ರಾಣಾ, ಶುಭಮಾನ್​ ಗಿಲ್​​; ಅಡಿಲೇಡ್​ ಟೆಸ್ಟ್​ಗೆ ಭಾರತ ರೆಡಿ!

ಕ್ಯಾನ್​ಬೆರಾ: ಅಹರ್ನಿಶಿ ಅಡಿಲೇಡ್​ ಟೆಸ್ಟ್​ಗೆ ಪೂರ್ವಭಾವಿಯಾಗಿ ನಡೆದ ಪಿಂಕ್​ಬಾಲ್​ ಅಭ್ಯಾಸ ಪಂದ್ಯದಲ್ಲಿ ಭಾರತ ಪರ ವೇಗಿ ಹರ್ಷಿತ್​ ರಾಣಾ (44ಕ್ಕೆ 4) ಬೌಲಿಂಗ್​ನಲ್ಲಿ ಗಮನಾರ್ಹ ನಿರ್ವಹಣೆ ತೋರಿದರೆ, ಬ್ಯಾಟಿಂಗ್​ನಲ್ಲಿ ಶುಭಮಾನ್​ ಗಿಲ್​ (50), ಯಶಸ್ವಿ ಜೈಸ್ವಾಲ್​ (45), ನಿತೀಶ್​ ಕುಮಾರ್​ ರೆಡ್ಡಿ (42) ಮತ್ತು ವಾಷಿಂಗ್ಟನ್​ ಸುಂದರ್​ (42) ಉಪಯುಕ್ತ ರನ್​ ಗಳಿಸಿ ಗಮನಸೆಳೆದರು.

ದ್ವಿದಿನ ಅಭ್ಯಾಸ ಪಂದ್ಯದ ಮೊದಲ ದಿನ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು. ಹೀಗಾಗಿ 2ನೇ ದಿನ ತಲಾ 50 ಓವರ್​ಗಳ ಪಂದ್ಯ ಆಡಲು ನಿರ್ಧರಿಸಲಾಗಿತ್ತು. ಆದರೆ ಮಳೆ ಅಡಚಣೆಯಿಂದಾಗಿ ಪಂದ್ಯವನ್ನು ತಲಾ 46 ಓವರ್​ಗಳಿಗೆ ಕಡಿತಗೊಳಿಸಲಾಯಿತು. ಮನುಕಾ ಓವಲ್​ನಲ್ಲಿ ಭಾನುವಾರ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಆತಿಥೇಯ ಆಸ್ಟ್ರೆಲಿಯಾ ಪ್ರಧಾನಿ ಇಲೆವೆನ್​ ತಂಡ ಆರಂಭಿಕ ಸ್ಯಾಮ್​ ಕೊನ್​ಸ್ಟಾಸ್​ (107) ಶತಕದ ನಡುವೆ 43.2 ಓವರ್​ಗಳಲ್ಲಿ 240 ರನ್​ಗಳಿಗೆ ಸರ್ವಪತನ ಕಂಡಿತು. ಹರ್ಷಿತ್​ಗೆ ಆಕಾಶ್​ದೀಪ್​ (58ಕ್ಕೆ 2) ಮತ್ತು ಇತರ ವೇಗಿಗಳು ಉತ್ತಮ ಬೆಂಬಲ ಒದಗಿಸಿದರು. ಪ್ರತಿಯಾಗಿ ಭಾರತ ನಿಗದಿತ 46 ಓವರ್​ಗಳಲ್ಲಿ 5 ವಿಕೆಟ್​ಗೆ 257 ರನ್​ ಗಳಿಸಿ ಡ್ರಾ ಸಾಧಿಸಿತು.

ಸರ್ಫ್ರಾಜ್​​ ಕೀಪಿಂಗ್​

ರಿಷಭ್​ ಪಂತ್​ ಪಂದ್ಯದ ಮೊದಲ 22.1 ಓವರ್​ ವಿಕೆಟ್​ ಕೀಪಿಂಗ್​ ಮಾಡಿದರು. ನಂತರದಲ್ಲಿ ಸರ್ಫ್ರಾಜ್​​ ಖಾನ್​ ವಿಕೆಟ್​ ಕೀಪರ್​ ಆಗಿ ಕಾರ್ಯನಿರ್ವಹಿಸಿದರು.

ಬ್ಯಾಟರ್​ಗಳಿಂದ ಉತ್ತಮ ಅಭ್ಯಾಸ

4 ವರ್ಷಗಳ ಹಿಂದೆ ಆಡಿದ ಕೊನೇ ಅಹರ್ನಿಶಿ ಟೆಸ್ಟ್​ನಲ್ಲಿ ಕೇವಲ 36 ರನ್​ಗೆ ಆಲೌಟ್​ ಆಗಿದ್ದ ಭಾರತ ತಂಡದ ಬ್ಯಾಟರ್​ಗಳು ಈ ಬಾರಿ ಪಿಂಕ್​ಬಾಲ್​ನಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶಿಸಿದರು. ಜೈಸ್ವಾಲ್​ ಬಿರುಸಿನ ಆಟವಾಡಿ ರಾಹುಲ್​ ಜತೆ ಮೊದಲ ವಿಕೆಟ್​ಗೆ 75 ರನ್​ ಸೇರಿಸಿ ಔಟಾದರು. 44 ಎಸೆತಗಳಲ್ಲಿ 27 ರನ್​ ಗಳಿಸಿ ಉತ್ತಮ ಲಯದಲ್ಲಿದ್ದ ರಾಹುಲ್​ ಕೂಡ ಮರು ಓವರ್​ ನಂತರ ಸ್ವಯಂ ನಿವೃತ್ತಿ ಹೊಂದಿದರು. ಬೆನ್ನಲ್ಲೇ ರೋಹಿತ್​ ಶರ್ಮ (3) ಬೇಗನೆ ಔಟಾದರೆ, ಗಿಲ್​ ಅರ್ಧಶತಕ ಬಾರಿಸಿ ಫಿಟ್​ ಆಗಿರುವುದನ್ನು ಸಾಬೀತುಪಡಿಸಿ ಸ್ವಯಂ ನಿವೃತ್ತಿ ಹೊಂದಿದರು. ಬಳಿಕ ನಿತೀಶ್​ಕುಮಾರ್​ ರೆಡ್ಡಿ ಮತ್ತು ವಾಷಿಂಗ್ಟನ್​ ಸುಂದರ್​ ಕೂಡ ಪಿಂಕ್​ಬಾಲ್​ನಲ್ಲಿ ಬಿರುಸಿನ ಆಟವಾಡಿದರು.

ಅಡಿಲೇಡ್​ನಲ್ಲೂ ಮಧ್ಯಮ ಕ್ರಮಾಂಕಕ್ಕೆ ರೋಹಿತ್​?

ಅಡಿಲೇಡ್​ ಟೆಸ್ಟ್​ಗೆ ಭಾರತ ತಂಡದ ಬ್ಯಾಟಿಂಗ್​ ಕ್ರಮಾಂಕವನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದ್ದ ಅಭ್ಯಾಸ ಪಂದ್ಯದಲ್ಲಿ ಪರ್ತ್​ ಟೆಸ್ಟ್​ನಂತೆ ಜೈಸ್ವಾಲ್​ ಜತೆ ಕೆಎಲ್​ ರಾಹುಲ್​ ಇನಿಂಗ್ಸ್​ ಆರಂಭಿಸಿದರೆ, ಶುಭಮಾನ್​ ಗಿಲ್​ 3 ಮತ್ತು ನಾಯಕ ರೋಹಿತ್​ ಶರ್ಮ 4ನೇ ಕ್ರಮಾಂಕದಲ್ಲಿ ಆಡಿದರು. ಇದರಿಂದ ಅಡಿಲೇಡ್​ ಟೆಸ್ಟ್​ನಲ್ಲೂ ರೋಹಿತ್​ ಆರಂಭಿಕನ ಸ್ಥಾನವನ್ನು ರಾಹುಲ್​ಗೆ ಬಿಟ್ಟುಕೊಟ್ಟು ಮಧ್ಯಮ ಕ್ರಮಾಂಕದಲ್ಲೇ ಆಡುವ ನಿರೀಕ್ಷೆ ಹರಡಿದೆ.

ಬ್ಯಾಟ್​ ಹಿಡಿಯದ ಕೊಹ್ಲಿ, ಪಂತ್​

ಅಭ್ಯಾಸ ಪಂದ್ಯದಲ್ಲಿ ಭಾರತ ತಂಡದ ಎಲ್ಲ ಬ್ಯಾಟರ್​ಗಳು ಬ್ಯಾಟಿಂಗ್​ ಮಾಡುವ ಅವಕಾಶವಿದ್ದರೂ, ಪರ್ತ್​ ಟೆಸ್ಟ್​ ಶತಕವೀರ ವಿರಾಟ್​ ಕೊಹ್ಲಿ ಮತ್ತು ಕೀಪರ್-ಬ್ಯಾಟರ್​ ರಿಷಭ್​ ಪಂತ್​ ಬ್ಯಾಟಿಂಗ್​ಗೆ ಇಳಿಯಲಿಲ್ಲ. ಇದೇ ರೀತಿ ಪಂತ್​ ಟೆಸ್ಟ್​ ಬೌಲಿಂಗ್​ ಹೀರೋ ಜಸ್​ಪ್ರೀತ್​ ಬುಮ್ರಾ ಮತ್ತು ಅನುಭವಿ ಸ್ಪಿನ್ನರ್​ ಆರ್​. ಅಶ್ವಿನ್​ ಬೌಲಿಂಗ್​ ಮಾಡಲಿಲ್ಲ.

ಆಸೀಸ್​ ಪ್ರಧಾನಿ ಇಲೆವೆನ್​: 43.2 ಓವರ್​ಗಳಲ್ಲಿ 240 (ಕಾನ್​ಸ್ಟಾಸ್​ 107, ರೆನ್​ಷಾ 5, ಕ್ಲಿಂಟನ್​ 40, ಜೇಕಬ್ಸ್​ 61, ಹರ್ಷಿತ್​ 44ಕ್ಕೆ 4, ಆಕಾಶ್​ದೀಪ್​ 58ಕ್ಕೆ 2, ಸಿರಾಜ್​ 18ಕ್ಕೆ 1, ಪ್ರಸಿದ್ಧಕೃಷ್ಣ 37ಕ್ಕೆ 1, ವಾಷಿಂಗ್ಟನ್​ 38ಕ್ಕೆ 1, ಜಡೇಜಾ 32ಕ್ಕೆ 1). ಭಾರತ: 46 ಓವರ್​ಗಳಲ್ಲಿ 5 ವಿಕೆಟ್​ಗೆ 257 (ಜೈಸ್ವಾಲ್​ 45, ರಾಹುಲ್​ 27, ಗಿಲ್​ 50, ನಿತೀಶ್​ 42, ವಾಷಿಂಗ್ಟನ್​ 42*, ಜಡೇಜಾ 27, ಸರ್ಫ್ರಾಜ್​​ 1, ಪಡಿಕ್ಕಲ್​ 4*, ಚಾರ್ಲಿ ಆಂಡರ್​ಸನ್​ 30ಕ್ಕೆ 2, ರೇನ್​ಷಾ 13ಕ್ಕೆ 1).