ಕ್ರೀಡೆ

ಡೆಲ್ಲಿ ಕ್ಯಾಪಿಟಲ್ಸ್​ಗೆ ಗುಡ್​ಬೈ! ಕಡೆಗೂ ರಿಸ್ಕ್​ ತೆಗೆದುಕೊಂಡ ಹ್ಯಾರಿ ಬ್ರೂಕ್​, 2 ವರ್ಷ ಐಪಿಎಲ್​ನಿಂದ ಬ್ಯಾನ್? | Harry Brook

Harry Brook: ಇದೇ ಮಾರ್ಚ್​ 22ರಿಂದ ಆರಂಭಗೊಳ್ಳಲಿರುವ ಐಪಿಎಲ್​ 18ನೇ ಆವೃತ್ತಿಗೆ ಇನ್ನೇನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಚಾಂಪಿಯನ್ಸ್ ಟ್ರೋಫಿ ಟೀಮ್ ಇಂಡಿಯಾ ಗೆಲುವಿನ ಮೂಲಕ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದೇ ತಡ ಕ್ರಿಕೆಟ್ ಅಭಿಮಾನಿಗಳ ಚಿತ್ತ ಐಪಿಎಲ್​ನತ್ತ ಸಾಗಿದೆ. 10 ಬಲಿಷ್ಠ ತಂಡಗಳ ನಡುವಿನ ಜಿದ್ದಾಜಿದ್ದಿ ನೋಡಲು ಭಾರೀ ಕುತೂಹಲ, ಕೌತುಕ ಕೆರಳಿದೆ. ಹೀಗಿರುವಾಗಲೇ ಪ್ರಸ್ತುತ ಐಪಿಎಲ್​ನಿಂದ ಇಂಗ್ಲೆಂಡ್​ನ ಸ್ಟಾರ್​ ಕ್ರಿಕೆಟಿಗ ಹ್ಯಾರಿ ಬ್ರೂಕ್​ ಹೊರನಡೆದಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜತೆಗಿನ ಒಪ್ಪಂದದಿಂದ ಇದೀಗ ದಿಢೀರ್​ ಹಿಂದೆ ಸರಿದಿರುವ ಹ್ಯಾರಿ ಬ್ರೂಕ್​, ಮುಂದಿನ ಎರಡು ವರ್ಷಗಳ ಕಾಲ ಐಪಿಎಲ್​ನಿಂದ ನಿಷೇಧ ಪಡೆಯಲಿದ್ದಾರೆ. ಇದು ಒಪ್ಪಂದದ ಮೂಲ ನಿಯಮವಾಗಿದೆ. ಇದನ್ನು ಯಾರೇ ಉಲಂಘಿಸಿದ್ದೇ ಆಗಲಿ ಅವರನ್ನು ಎರಡು ವರ್ಷಗಳ ಸಮಯ ಐಪಿಎಲ್​ನಿಂದ ಬ್ಯಾನ್ ಮಾಡಲಾಗುವುದು ಎಂದು ಬಿಸಿಸಿಐ ಈ ಹಿಂದೆ ಒಪ್ಪಂದಕ್ಕೂ ಮುನ್ನವೇ ಸ್ಪಷ್ಟಪಡಿಸಿದೆ. ಹೀಗಿರುವಾಗ ಬ್ರೂಕ್ ತೆಗೆದುಕೊಂಡ ರಿಸ್ಕ್​, ಅವರ ಐಪಿಎಲ್​ ಆಡುವ ಬಯಕೆಯನ್ನು ಕಸಿದುಕೊಳ್ಳುವುದು ಬಹುತೇಕ ಖಚಿತ ಎಂದೇ ಹೇಳಲಾಗಿದೆ.

ದಿಢೀರ್​ ನಿರ್ಗಮನಕ್ಕೆ ಕಾರಣ

ತಮ್ಮ ನಿಲುವಿನ ಕುರಿತು ಮಾತನಾಡಿರುವ ಹ್ಯಾರಿ ಬ್ರೂಕ್​, "ನನಗೆ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸುವುದು ಮೊದಲ ಆದ್ಯತೆ. ಮುಂಬರುವ ಐಪಿಎಲ್‌ನಿಂದ ಹಿಂದೆ ಸರಿಯುವ ಕಠಿಣ ನಿರ್ಧಾರವನ್ನು ಕಡೆಗೂ ತೆಗೆದುಕೊಂಡಿದ್ದೇನೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆ ತಂಡದ ಅಭಿಮಾನಿಗಳಿಗೆ ಹೃದಯಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ. ಈಗ ಇಂಗ್ಲೆಂಡ್ ಕ್ರಿಕೆಟ್‌ಗೆ ನಿಜವಾಗಿಯೂ ಮಹತ್ವದ ಸಮಯ ಮತ್ತು ಮುಂಬರುವ ಸರಣಿಗೆ ತಯಾರಿ ನಡೆಸಲು ನಾನು ಸಂಪೂರ್ಣವಾಗಿ ಬದ್ಧನಾಗಿರಬೇಕು. ಹೀಗಾಗಿಯೇ ಐಪಿಎಲ್​ನಿಂದ ಹೊರಬರಲು ನಿರ್ಧರಿಸಿದ್ದೇನೆ, ಕ್ಷಮಿಸಿ" ಎಂದಿದ್ದಾರೆ.

"ನನಗೀಗ ಬಹಳ ಕಷ್ಟಕರ ಸಮಯ. ನಾನು ತೆಗೆದುಕೊಂಡ ನಿರ್ಧಾರ ಬಹುತೇಕರಿಗೆ ಇಷ್ಟವಾಗಿಲ್ಲ ಅನ್ನೋದು ನನಗೆ ಗೊತ್ತಿದೆ. ಇಲ್ಲಿ ಯಾರಿಗೂ ನಾನು ಅರ್ಥ ಮಾಡಿಸುವ ಪ್ರಯತ್ನಕ್ಕೆ ಮುಂದಾಗಲ್ಲ. ಅದನ್ನು ಅವರೊಂದಿಗೆಯೇ ಬಿಟ್ಟು ಬಿಡುತ್ತೀನಿ. ದೇಶಕ್ಕಾಗಿ ಆಡುವುದು ನನ್ನ ಆದ್ಯತೆ ಮತ್ತು ಪ್ರಾಮುಖ್ಯತೆ" ಎಂದು ಬ್ರೂಕ್ ತಮ್ಮ ಜಾಲತಾಣದ ಖಾತೆಯಲ್ಲಿ ಬರೆದುಕೊಂಡಿದ್ದಾರೆ,(ಏಜೆನ್ಸೀಸ್).