ಟೆಸ್ಟ್​ ಸರಣಿ ಗೆದ್ದ ಸಂಭ್ರಮದಲ್ಲಿ ದಕ್ಷಿಣ ಆಫ್ರಿಕಾ ಏಜೆನ್ಸಿ
ಕ್ರೀಡೆ

ಸರಣಿ ಗೆದ್ದ ದಕ್ಷಿಣ ಆಫ್ರಿಕಾ; ವಿಶ್ವ ನಂ. 1 ಪಟ್ಟ ಕಳೆದುಕೊಂಡ ಆಸ್ಟ್ರೇಲಿಯಾ!

ಕೊನೇ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೆಲಿಯಾಕ್ಕೆ 176 ರನ್​ ಸೋಲು

ಕೇಪ್​ಟೌನ್​: ಸ್ಪಿನ್ನರ್​ ಸೈಮನ್​ ಹಾರ್ಮರ್​ (16ಕ್ಕೆ 6) ಮಾರಕ ಬೌಲಿಂಗ್​ ದಾಳಿಯ ನೆರವಿನಿಂದ ಆತಿಥೇಯ ಹಾಗೂ ವಿಶ್ವ ಚಾಂಪಿಯನ್​ ದಕ್ಷಿಣ ಆಫ್ರಿಕಾ ತಂಡ 3ನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೆಲಿಯಾವನ್ನು 176 ರನ್​ಗಳಿಂದ ಮಣಿಸಿದೆ. ಇದರೊಂದಿಗೆ ಟೆಂಬಾ ಬವುಮಾ ಪಡೆ 3 ಪಂದ್ಯಗಳ ಸರಣಿಯನ್ನು 2-1ರಿಂದ ವಶಪಡಿಸಿಕೊಂಡಿದೆ.

ನ್ಯೂಲ್ಯಾಂಡ್ಸ್​ ಮೈದಾನದಲ್ಲಿ ಶನಿವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಕೊನೇ ದಿನ 288 ರನ್​ ಸವಾಲು ಬೆನ್ನಟ್ಟಲು ಆರಂಭಿಸಿದ ಆಸೀಸ್​, ಭೋಜನ ವಿರಾಮದ ಬಳಿಕ 57.1 ಓವರ್​ಗಳಲ್ಲಿ 111 ರನ್​ಗಳಿಗೆ ಆಲೌಟ್​ ಆಯಿತು. ತವರಿನ ಸರಣಿಯ ಮೊದಲ ಟೆಸ್ಟ್​ ಸೋತಿದ್ದ ದಕ್ಷಿಣ ಆಫ್ರಿಕಾ ನಂತರದ 2 ಟೆಸ್ಟ್​ಗಳಲ್ಲೂ ಗೆದ್ದು ದಿಟ್ಟ ತಿರುಗೇಟು ನೀಡಿತು.

ಪ್ಯಾಟ್​ ಕಮ್ಮಿನ್ಸ್​ ಪಡೆ ಭೋಜನ ವಿರಾಮದ ವೇಳೆ 60 ರನ್​ಗಳಿಗೆ 7 ವಿಕೆಟ್​ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತು. ವೇಗಿ ಕಗಿಸೊ ರಬಾಡ (39ಕ್ಕೆ 3) ಮೊದಲ 3 ವಿಕೆಟ್​ ಕಬಳಿಸಿ ಕಾಂಗರೂಗಳಿಗೆ ಆರಂಭಿಕ ಆಘಾತ ನೀಡಿದರೆ, ನಂತರ ಹಾರ್ಮರ್​ ಸ್ಪಿನ್​ ದಾಳಿಯಿಂದ ಕಂಗೆಡಿಸಿದರು. ಕ್ಯಾಮರಾನ್​ ಗ್ರೀನ್​ (27) ಮತ್ತು ನಾಥನ್​ ಲ್ಯಾನ್​ (33*) ಹೋರಾಟ ಹರಿಣಗಳ ಗೆಲುವನ್ನು ತುಸು ವಿಳಂಬಗೊಳಿಸಿತು.

ದಕ್ಷಿಣ ಆಫ್ರಿಕಾ: 329 ಮತ್ತು 387, ಆಸ್ಟ್ರೆಲಿಯಾ: 429 ಮತ್ತು 57.1 ಓವರ್​ಗಳಲ್ಲಿ 111 (ಹೆಡ್​ 14, ರೆನ್​ಶಾ 0, ಲಬುಶೇನ್​ 4, ಗ್ರೀನ್​ 27, ಇಂಗ್ಲಿಸ್​ 4, ಕ್ಯಾರಿ, 2, ಕೊನೊಲಿ 0, ಸ್ಟಾರ್ಕ್​ 0, ಕಮ್ಮಿನ್ಸ್​ 11, ಲ್ಯಾನ್​ 33*, ಹಾರ್ಮರ್​ 16ಕ್ಕೆ 6, ರಬಾಡ 39ಕ್ಕೆ 3). ಪಂದ್ಯಶ್ರೇಷ್ಠ: ಸೈಮನ್​ ಹಾರ್ಮರ್​, ಸರಣಿಶ್ರೇಷ್ಠ: ಮಾಕೋರ್ ಯಾನ್ಸೆನ್​.

ವಿಶ್ವ ನಂ. 1 ಪಟ್ಟ ಕಳೆದುಕೊಂಡ ಆಸೀಸ್​

ಕೇಪ್​ಟೌನ್​ ಟೆಸ್ಟ್​ ಸೋಲಿನೊಂದಿಗೆ ಆಸ್ಟ್ರೆಲಿಯಾ ತಂಡ ಐಸಿಸಿ ಟೆಸ್ಟ್​ ರ್ಯಾಂಕಿಂಗ್​ ಮತ್ತು ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ (ಡಬ್ಲ್ಯುಟಿಸಿ) ಅಂಕಪಟ್ಟಿ ಎರಡರಲ್ಲೂ ಅಗ್ರಸ್ಥಾನವನ್ನು ಕಳೆದುಕೊಂಡಿದೆ. ಟೆಸ್ಟ್​ ರ್ಯಾಂಕಿಂಗ್​ನಲ್ಲಿ ಈಗ ದಕ್ಷಿಣ ಆಫ್ರಿಕಾ ನೂತನ ವಿಶ್ವ ನಂ. 1 ಆಗಿದ್ದರೆ, ಆಸ್ಟ್ರೆಲಿಯಾ 2ನೇ ಸ್ಥಾನಕ್ಕಿಳಿದಿದೆ. ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಈಗ ನ್ಯೂಜಿಲೆಂಡ್​ (ಶೇ.72.22) ಅಗ್ರಸ್ಥಾನಕ್ಕೇರಿದ್ದರೆ, ದಕ್ಷಿಣ ಆಫ್ರಿಕಾ (ಶೇ.71.43) 2ನೇ ಸ್ಥಾನಕ್ಕೇರಿದೆ. ಆಸೀಸ್​ (ಶೇ.69.23) 3ನೇ ಸ್ಥಾನಕ್ಕಿಳಿದಿದೆ.