ಕ್ರೀಡೆ

ನಾಯಕಿ ಹರ್ಮಾನ್​ಪ್ರೀತ್​ ಆರ್ಭಟ; ಡಬ್ಲ್ಯುಪಿಎಲ್​ನಲ್ಲಿ ಪ್ಲೇಆಫ್​ಗೇರಿದ ಮುಂಬೈ ಇಂಡಿಯನ್ಸ್​​

ನವದೆಹಲಿ: ನಾಯಕಿ ಹರ್ಮಾನ್​ಪ್ರೀತ್​ ಕೌರ್​ (95*ರನ್​, 48 ಎಸೆತ, 10 ಬೌಂಡರಿ, 5 ಸಿಕ್ಸರ್​) ಬ್ಯಾಟಿಂಗ್​ ಆರ್ಭಟದ ಬಲದಿಂದ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡ ವುಮೆನ್ಸ್​ ಪ್ರೀಮಿಯರ್​ ಲೀಗ್​ 2ನೇ ಆವೃತ್ತಿಯ ಪಂದ್ಯದಲ್ಲಿ ಗುಜರಾತ್​ ಜೈಂಟ್ಸ್​ ವಿರುದ್ಧ 7 ವಿಕೆಟ್​ಗಳಿಂದ ಗೆಲುವು ದಾಖಲಿಸಿದೆ. ಟೂರ್ನಿಯಲ್ಲಿ ಕಂಡ 5ನೇ ಜಯದೊಂದಿಗೆ ಮುಂಬೈ ಪ್ಲೇಆಫ್​​ ಪ್ರವೇಶ ಖಚಿತಪಡಿಸಿಕೊಂಡಿದ್ದರೆ, ಗುಜರಾತ್​ ಪ್ರಶಸ್ತಿ ರೇಸ್​ನಿಂದ ಬಹುತೇಕ ಹೊರಬಿದ್ದಿದೆ.

ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದ ಗುಜರಾತ್​ ತಂಡ ದಯಾಲನ್​ ಹೇಮಲತಾ (74 ರನ್​, 40 ಎಸೆತ, 9 ಬೌಂಡರಿ, 2 ಸಿಕ್ಸರ್​) ಮತ್ತು ನಾಯಕಿ ಬೆತ್​ ಮೂನಿ (66 ರನ್​, 35 ಎಸೆತ, 8 ಬೌಂಡರಿ, 3 ಸಿಕ್ಸರ್​) ಜೋಡಿ 2ನೇ ವಿಕೆಟ್​ಗೆ 62 ಎಸೆತಗಳಲ್ಲಿ 121 ರನ್​ ಜತೆಯಾಟವಾಡಿದ ನೆರವಿನಿಂದ 7 ವಿಕೆಟ್​ಗೆ 190 ರನ್​ ಪೇರಿಸಿತು. ಪ್ರತಿಯಾಗಿ ಮುಂಬೈ 19.5 ಓವರ್​ಗಳಲ್ಲಿ 3 ವಿಕೆಟ್​ಗೆ 191 ರನ್​ ಗಳಿಸಿ ಗೆದ್ದಿತು. ಹರ್ಮಾನ್​ಪ್ರೀತ್​-ಅಮೆಲಿಯ ಕೆರ್​ ಮುರಿಯದ 4ನೇ ವಿಕೆಟ್​ಗೆ 38 ಎಸೆತಗಳಲ್ಲಿ 93 ರನ್​ ಕಸಿಯಿತು. ಇದರಲ್ಲಿ 76 ರನ್​ ಹರ್ಮಾನ್​ ಒಬ್ಬರೇ ಸಿಡಿಸಿದರು.

ಗುಜರಾತ್​ ಜೈಂಟ್ಸ್​: 7 ವಿಕೆಟ್​ಗೆ 190 (ವೊಲ್ವಾರ್ಡ್​ 13, ಮೂನಿ 66, ಹೇಮಲತಾ 74, ಲಿಚ್​ಫೀಲ್ಡ್​ 3, ಗಾರ್ಡ್​ನರ್​ 1,ಫುಲ್ಮಲಿ 21*, ಸೈಕಾ ಇಶಾಕ್​ 31ಕ್ಕೆ 2, ಶಬ್ನಿಮ್​ 30ಕ್ಕೆ 1, ಹ್ಯಾಲಿ 22ಕ್ಕೆ 1, ಪೂಜಾ 45ಕ್ಕೆ 1).

ಮುಂಬೈ ಇಂಡಿಯನ್ಸ್​: 19.5 ಓವರ್​ಗಳಲ್ಲಿ 3 ವಿಕೆಟ್​ಗೆ 191 (ಯಸ್ತಿಕಾ 49, ಹರ್ಮಾನ್​ಪ್ರೀತ್​ 95*, ಕೆರ್​ 12*, ತನುಜಾ 21ಕ್ಕೆ 1).