ಕ್ರೀಡೆ

ಟಿ20 ವಿಶ್ವಕಪ್‌ಗೆ ಭಾರತ ಮಹಿಳಾ ತಂಡ ಪ್ರಕಟ: ಡಬ್ಲ್ಯುಪಿಎಲ್ ಚಾಂಪಿಯನ್ ಆರ್‌ಸಿಬಿಯ ಐವರು ಆಯ್ಕೆ

ನವದೆಹಲಿ: ಐಸಿಸಿ ಮಹಿಳಾ ಟಿ20 ವಿಶ್ವಕಪ್ 9ನೇ ಆವೃತ್ತಿಯ ಟೂರ್ನಿಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಭಾರತ ಸೇರಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಮಹಿಳಾ ತಂಡಗಳನ್ನು ಹೆಸರಿಸಲಾಗಿದೆ. ಅಕ್ಟೋಬರ್ 3ರಂದು ಯುಎಇಯಲ್ಲಿ ಆರಂಭವಾಗಲಿರುವ ಟೂರ್ನಿಗೆ ಬಿಸಿಸಿಐ ಮಂಗಳವಾರ ಅನುಭವಿ ಹಾಗೂ ಯುವ ಆಟಗಾರ್ತಿಯರನ್ನು ಒಳಗೊಂಡಿರುವ ಹರ್ಮಾನ್‌ಪ್ರೀತ್ ಕೌರ್ ಸಾರಥ್ಯದ ಭಾರತ ತಂಡವನ್ನು ಹೆಸರಿಸಿದ್ದು, ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ ತಂಡದಲ್ಲಿ ಸ್ಥಾನ ಪಡೆದಿರುವ ಏಕೈಕ ಕನ್ನಡತಿಯಾಗಿದ್ದಾರೆ.

ಜುಲೈನಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸಿದ್ದ ಬಹುತೇಕ ಆಟಗಾರ್ತಿಯರು ಸ್ಥಾನ ಪಡೆದಿದ್ದು, ಸದ್ಯ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಶ್ರೇಯಾಂಕಾ ಪಾಟೀಲ್ ಹಾಗೂ ಮೊಣಕಾಲು ಗಾಯದಿಂದ ಬಳಲುತ್ತಿರುವ ವಿಕೆಟ್ ಕೀಪರ್-ಬ್ಯಾಟರ್ ಯಸ್ತಿಕಾ ಭಾಟಿಯಾ ಪಾಲ್ಗೊಳ್ಳುವಿಕೆ ಫಿಟ್ನೆಸ್ ಮೇಲೆ ನಿರ್ಧರಿತವಾಗಲಿದೆ. ಸ್ಮತಿ ಮಂದನಾ ಉಪನಾಯಕಿ ಆಗಿ ಹರ್ಮಾನ್‌ಪ್ರೀತ್ ಕೌರ್‌ಗೆ ನೆರವಾಗಲಿದ್ದಾರೆ.

ಡಬ್ಲ್ಯುಪಿಎಲ್‌ನಲ್ಲಿ ಮಿಂಚಿದ್ದ ಕೇರಳದ ಆಶಾ ಶೋಭನಾ ಮತ್ತು ಸಜೀವನ್ ಸಜನಾ ಮೊದಲ ಬಾರಿ ಟಿ20 ವಿಶ್ವಕಪ್ ಆಡುವ ಅವಕಾಶ ಪಡೆದಿದ್ದಾರೆ.
ಆಲ್ರೌಂಡರ್ ದೀಪ್ತಿ ಶರ್ಮ ಜತೆಗೆ ಆಶಾ ಶೋಭನಾ ಮತ್ತು ರಾಧಾ ಯಾದವ್ ಸ್ಪಿನ್ನರ್‌ಗಳಾಗಿದ್ದು, ರೇಣುಕಾ ಸಿಂಗ್ ಮತ್ತು ಅರುಂಧತಿ ರೆಡ್ಡಿ ಮತ್ತು ಪೂಜಾ ವಸಾಕರ್ ಸ್ಪೆಷಲಿಸ್ಟ್ ವೇಗಿಯಾಗಿದ್ದಾರೆ. ಭಾರತ ಹಾಗೂ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಒಂದೇ ಗುಂಪಿನಲ್ಲಿದ್ದು, ಪಾಕಿಸ್ತಾನ, ನ್ಯೂಜಿಲೆಂಡ್, ಶ್ರೀಲಂಕಾ ಇತರ ತಂಡಗಳೆನಿಸಿವೆ. ಅಕ್ಟೋಬರ್ 4 ರಂದು ನ್ಯೂಜಿಲೆಂಡ್ ವಿರುದ್ಧ ಭಾರತ ತನ್ನ ಅಭಿಯಾನ ಆರಂಭಿಸಲಿದೆ.

ಭಾರತ ತಂಡ: ಹರ್ಮಾನ್‌ಪ್ರೀತ್ ಕೌರ್ (ನಾಯಕಿ), ಸ್ಮತಿ ಮಂದನಾ (ಉಪನಾಯಕಿ), ಶೆಾಲಿ ವರ್ಮ, ದೀಪ್ತಿ ಶರ್ಮ, ಜೆಮೀಮಾ ರೋಡ್ರಿಗಸ್, ರಿಚಾ ೋಷ್ (ವಿ.ಕೀ), ಯಸ್ತಿಕಾ ಭಾಟಿಯಾ (ವಿ.ಕೀ), ಪೂಜಾ ವಸಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ದಯಾಳನ್ ಹೇಮಲತಾ, ಆಶಾ ಶೋಭನಾ, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್ ಹಾಗೂ ಸಜೀವನ್ ಸಜನಾ.
ಮೀಸಲು: ಉಮಾ ಛೇಟ್ರಿ, ತನುಜಾ ಕನ್ವರ್, ಸೈಮಾ ಠಾಕೂರ್.