ಮುಂಬೈ: ನಾಯಕಿ ಹರ್ಮಾನ್ಪ್ರೀತ್ ಕೌರ್ (23ಕ್ಕೆ 2) ಬೌಲಿಂಗ್ನಲ್ಲಿ ಮಿಂಚುವುದರೊಂದಿಗೆ ಭಾರತ ತಂಡ ಮಹಿಳೆಯರ ಏಕೈಕ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೆಲಿಯಾ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸುವ ನಿರೀಕ್ಷೆಯಲ್ಲಿದೆ. ಇನಿಂಗ್ಸ್ ಸೋಲಿನ ಭೀತಿಯಿಂದ ಪಾರಾದ ಆಸೀಸ್ ಸದ್ಯ 46 ರನ್ ಮುನ್ನಡೆಯಲ್ಲಿದ್ದು, 4ನೇ ಹಾಗೂ ಅಂತಿಮ ದಿನದಾಟದಲ್ಲಿ ಗೆಲುವು ಒಲಿಸಿಕೊಳ್ಳುವ ಅತ್ಯುತ್ತಮ ಅವಕಾಶ ಭಾರತದ ಮುಂದಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶನಿವಾರ 7 ವಿಕೆಟ್ಗೆ 376 ರನ್ಗಳಿಂದ 3ನೇ ದಿನದಾಟ ಮುಂದುವರಿಸಿದ ಭಾರತ, 406 ರನ್ಗಳಿಗೆ ಆಲೌಟ್ ಆಗಿ ಮೊದಲ ಇನಿಂಗ್ಸ್ನಲ್ಲಿ 187 ರನ್ಗಳ ಭಾರಿ ಮುನ್ನಡೆ ಸಾಧಿಸಿತು. ಪ್ರತಿಯಾಗಿ 2ನೇ ಇನಿಂಗ್ಸ್ನಲ್ಲಿ ದಿಟ್ಟ ಹೋರಾಟವನ್ನೇ ಪ್ರದರ್ಶಿಸಿದ ಆಸ್ಟ್ರೆಲಿಯಾ ಇನಿಂಗ್ಸ್ ಸೋಲಿನ ಭೀತಿಯಿಂದ ಪಾರಾಯಿತು. ಆದರೂ, ದಿನದ ಕೊನೆಯಲ್ಲಿ ಹರ್ಮಾನ್ಪ್ರೀತ್ ತ್ವರಿತಗತಿಯಲ್ಲಿ 2 ವಿಕೆಟ್ ಕಬಳಿಸುವುದರೊಂದಿಗೆ ಆಸೀಸ್ಗೆ ಕಡಿವಾಣ ಹಾಕಿದ್ದಾರೆ. ದಿನದಂತ್ಯಕ್ಕೆ 5 ವಿಕೆಟ್ಗೆ 233 ರನ್ ಪೇರಿಸಿರುವ ಆಸೀಸ್, ಎಲ್ಲ ಪ್ರಮುಖ ಬ್ಯಾಟರ್ಗಳ ವಿಕೆಟ್ ಕಳೆದುಕೊಂಡಿದ್ದು, ಕೊನೇ ದಿನ ಸೋಲು ತಪ್ಪಿಸಿಕೊಳ್ಳಲು ಬಾಲಂಗೋಚಿಗಳನ್ನೇ ನೆಚ್ಚಿಕೊಂಡಿದೆ.
ಆಸೀಸ್ ವಿರುದ್ಧ ಈ ಹಿಂದೆ ಆಡಿರುವ 10 ಟೆಸ್ಟ್ಗಳಲ್ಲಿ, 4ರಲ್ಲಿ ಸೋತು, 6ರಲ್ಲಿ ಡ್ರಾ ಸಾಧಿಸಿರುವ ಭಾರತ ಮೊಟ್ಟಮೊದಲ ಗೆಲುವಿನ ಹಂಬಲದಲ್ಲಿದೆ. ಅಂತಿಮ ದಿನ ಆಸ್ಟ್ರೆಲಿಯಾವನ್ನು ಬೇಗನೆ ಕಟ್ಟಿಹಾಕಿದರೆ, ಭಾರತ ಸುಲಭ ಗುರಿಯನ್ನು ಯಶಸ್ವಿಯಾಗಿ ಚೇಸಿಂಗ್ ಮಾಡಬಹುದಾಗಿದೆ. ಭಾರತ ಮೊದಲ ಇನಿಂಗ್ಸ್ನಲ್ಲಿ ಪೇರಿಸಿದ 406 ರನ್, ಆಸೀಸ್ ವಿರುದ್ಧ ಇದುವರೆಗೆ ಆಡಿದ 11 ಟೆಸ್ಟ್ಗಳಲ್ಲಿ ಗರಿಷ್ಠ ಮೊತ್ತವಾಗಿದೆ. ದೀಪ್ತಿ ಶರ್ಮ-ಪೂಜಾ ವಸ್ತ್ರಾಕರ್ ಪೇರಿಸಿದ 122 ರನ್, ಮಹಿಳೆಯರ ಟೆಸ್ಟ್ನಲ್ಲಿ ಭಾರತ ಪರ 8ನೇ ವಿಕೆಟ್ಗೆ ಭಾರತ ಪರ ಗರಿಷ್ಠ ಜತೆಯಾಟವಾಗಿದೆ.
ಆಸ್ಟ್ರೆಲಿಯಾ: 219 ಮತ್ತು 90 ಓವರ್ಗಳಲ್ಲಿ 5 ವಿಕೆಟ್ಗೆ 233 (ಬೆತ್ ಮೂನಿ 33, ಪೆರ್ರಿ 45, ತಹ್ಲಿಯಾ 73, ಅಲಿಸ್ಸಾ ಹೀಲಿ 32, ಸುದರ್ಲ್ಯಾಂಡ್ 12*, ಗಾರ್ಡ್ನರ್ 7*, ಸ್ನೇಹಾ 54ಕ್ಕೆ 2, ಹರ್ಮಾನ್ಪ್ರೀತ್ 23ಕ್ಕೆ 2). ಭಾರತ: 126.3 ಓವರ್ಗಳಲ್ಲಿ 406 (ದೀಪ್ತಿ 78, ಪೂಜಾ 47, ಗಾರ್ಡ್ನರ್ 100ಕ್ಕೆ 4, ಗಾರ್ತ್ 58ಕ್ಕೆ 2, ಸುದರ್ಲ್ಯಾಂಡ್ 41ಕ್ಕೆ 2).