ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನದ ಫಲವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್ ಎದುರು 10 ರನ್ಗಳ ಜಯ ಸಾಧಿಸಿದ್ದು, ಹಾರ್ದಿಕ್ ಪಾಂಡ್ಯ ಪಡೆಗೆ ತೀವ್ರ ಮುಖಭಂಗವಾಗಿದೆ. ಇತ್ತ ಮುಂಬೈ ಸೋಲಿನ ಬೆನ್ನಲ್ಲೇ ಹಲವರು ಹಾರ್ದಿಕ್ ನಾಯಕತ್ವದ ಕುರಿತು ಅಪಸ್ವರ ತೆಗೆದಿದ್ದು, ಈ ಬಗ್ಗೆ ಕಿಡಿಕಾರಿದ್ದಾರೆ.
ಮುಂಬೈ ಸೋಲಿನ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, ನನಗೆ ತಿಳಿದಿರುವ ಮಟ್ಟಿಗೆ ಹಾರ್ದಿಕ್ ಪಾಂಡ್ಯ ಅವರ ಮೆದುಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದುಕೊಂಡಿದ್ದೇನೆ. ಏಕೆಂದರೆ ಕೆಲವೊಮ್ಮೆ ಅವರು ಮೊದಲ ಓವರ್ ಮತ್ತು ಕೆಲವೊಮ್ಮೆ 5 ನೇ ಓವರ್ ಬೌಲ್ ಮಾಡಲು ಬರುತ್ತಾರೆ.
ವಾಸ್ತವವಾಗಿ ಹಾರ್ದಿಕ್ ತಂಡವನ್ನು ಮುನ್ನಡೆಸಲು ಯಾವುದೇ ಯೋಜನೆಯನ್ನು ರೂಪಿಸಿದಂತೆ ಕಾಣುತ್ತಿಲ್ಲ. ಬೌಲಿಂಗ್ನಲ್ಲಿ ಆಗುತ್ತಿರುವ ಬದಲಾವಣೆಗಳು ಹಾರ್ದಿಕ್ನಲ್ಲಿ ಗೊಂದಲ ಮೂಡಿಸಿವೆ. ಆತ ಏನು ಮಾಡುತ್ತಿದ್ದಾನೆ ಎಂಬುದು ತಿಳಿಯುತ್ತಿಲ್ಲ. ತಂಡದ ಹಿತದೃಷ್ಠಿಯಿಂದ ಮುಂದಿನ ದಿನಗಳಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ ಎಂದು ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ.
ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಯುವ ಆರಂಭಿಕ ದಾಂಡಿಗ ಜೇಕ್ ಫ್ರೇಸರ್ ಮೆಕ್ಗುರ್ಕ್ (84) ಸ್ಪೋಟಕ ಆರಂಭ ಒದಗಿಸಿದ್ದರು. ಅಂತಿಮ ಓವರ್ಗಳಲ್ಲಿ ಟ್ರಿಸ್ಟನ್ ಸ್ಟಬ್ಸ್ ಸ್ಫೋಟಕ ಆಟದ ಫಲವಾಗಿ 20 ಓವರ್ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 4 ವಿಕೆಟ್ ನಷ್ಟಕ್ಕೆ 257 ರನ್ ಗಳಿಸಿತ್ತು.
258 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಿಲಕ್ ವರ್ಮಾ (63 ರನ್) ಪ್ರತಿರೋಧದ ಹೊರತಾಗಿಯೂ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 247 ರನ್ಗಳಿಸಲಷ್ಟೇ ಶಕ್ತವಾಯಿತು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 10ರನ್ಗಳ ಜಯ ಸಾಧಿಸಿ ಗೆಲುವಿನ ನಗೆ ಬೀರಿತ್ತು.