ಬೆಂಗಳೂರು: ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅಪ್ಪನಾದ ಸಂಭ್ರಮವನ್ನು ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಬೆನ್ನಲ್ಲೇ ಅಭಿಮಾನಿಗಳಿಂದ ಭರ್ಜರಿ ಟ್ರೋಲ್ಗಳಿಗೂ ಒಳಗಾಗಿದ್ದಾರೆ. 26 ವರ್ಷದ ಹಾರ್ದಿಕ್ ಪಾಂಡ್ಯ ಜನವರಿ 1ರಂದು ನತಾಶಾ ಸ್ಟಾಂಕೋವಿಕ್ ಜತೆಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಅದಾಗಿ 7 ತಿಂಗಳಲ್ಲೇ ತಂದೆಯಾಗಿರುವ ಅವರ ವೇಗ, ಅವರ ಬ್ಯಾಟಿಂಗ್ನಷ್ಟೇ ಸ್ಫೋಟಕವಾಗಿದೆ ಎಂದು ಅಭಿಮಾನಿಗಳು ಕಾಲೆಳೆದಿದ್ದಾರೆ.
ಲಾಕ್ಡೌನ್ ನಡುವೆ ಮೇ ತಿಂಗಳಲ್ಲಿ ಹಾರ್ದಿಕ್ ಪಾಂಡ್ಯ, ನತಾಶಾ ಗರ್ಭಿಣಿಯಾಗಿರುವ ವಿಷಯವನ್ನು ಬಹಿರಂಗಪಡಿಸಿ ಎಲ್ಲರಲ್ಲೂ ಅಚ್ಚರಿ ಹುಟ್ಟಿಸಿದ್ದರು. ಇದಕ್ಕೂ ಮುನ್ನ ಅವರು ಸರಳವಾಗಿ ವಿವಾಹವಾಗಿದ್ದರು ಎನ್ನಲಾಗುತ್ತಿದೆ. ಇದಾಗಿ ಅದಾಗಿ ಎರಡೇ ತಿಂಗಳಲ್ಲಿ ಮಗುವಿನ ಜನನದ ವಿಷಯವನ್ನೂ ಹಾರ್ದಿಕ್ ಪಾಂಡ್ಯ ಹಂಚಿಕೊಂಡಿರುವುದು ಅಭಿಮಾನಿಗಳಿಗೆ ಮತ್ತಷ್ಟು ಅಚ್ಚರಿ ತಂದಿದೆ.
ಪಾಂಡ್ಯ ಇಷ್ಟೊಂದು ಬೇಗನೆ ಅಪ್ಪನಾಗಿರುವ ವಿಷಯವನ್ನು ಕೇಳಿದ ಬೆನ್ನಲ್ಲೇ ಅಭಿಮಾನಿಗಳು ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮ ದಂಪತಿ ಮತ್ತು ಯುವರಾಜ್ ಸಿಂಗ್ ಅವರನ್ನೂ ಹಾರ್ದಿಕ್ ಪಾಂಡ್ಯರ ಟ್ರೋಲ್ಗಳಿಗೆ ಬಳಸಿಕೊಂಡಿದ್ದಾರೆ. ಟಿ20 ಕ್ರಿಕೆಟ್ನ ನಿಜವಾದ ರಾಯಭಾರಿ ಎಂದು ಹಾರ್ದಿಕ್ ಪಾಂಡ್ಯ ನಿರೂಪಿಸಿದ್ದಾರೆ ಎಂದೂ ಟ್ರೋಲ್ ಮಾಡಲಾಗಿದೆ.