ಕ್ರೀಡೆ

ಟಿ-20 ಆಯ್ತು… ಇನ್ಮುಂದೆ ಏಕದಿನ ಪಂದ್ಯಕ್ಕೂ ಪಾಂಡ್ಯಾ ಕ್ಯಾಪ್ಟನ್!

ನವದೆಹಲಿ: ಸದ್ಯದಲ್ಲೇ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಭಾರತದ ಏಕದಿನ ಹಾಗೂ ಟಿ20 ತಂಡದ ನಾಯಕತ್ವ ವಹಿಸುವ ಸಾಧ್ಯತೆ ಹೆಚ್ಚಿದೆ ಎಂಬ ಲೆಕ್ಕಾಚಾರ ಇದೀಗ ಕ್ರಿಕೆಟ್ ಅಂಗಳದಲ್ಲಿ ಆರಂಭವಾಗಿದೆ. ಕಳೆದ ಜೂನ್​ನಲ್ಲಿ ಪಾಂಡ್ಯಾ ಟಿ-20 ನಾಯಕತ್ವಕ್ಕೆ ಪಾದಾರ್ಪಣೆ ಮಾಡಿದರು. ಇದಾಗಿ ಇತ್ತೀಚೆಗೆ ಟಿ-20 ವಿಶ್ವಕಪ್ ಟೂರ್ನಿ ಮುಕ್ತಾಯವಾಗುತ್ತಿದ್ದಂತೆ ಟಿ-20 ತಂಡಕ್ಕೆ ಹಾರ್ದಿಕ್ ಪಾಂಡ್ಯಾಗೆ ನಾಯಕತ್ವದ ಜವಾಬ್ದಾರಿ ನೀಡಬೇಕು ಎಂಬ ಚರ್ಚೆ ಹೆಚ್ಚಾಗಿತ್ತು.

ಟೀಂ ಇಂಡಿಯಾದ ಹಾಲಿ ನಾಯಕ ರೋಹಿತ್ ಶರ್ಮಾ ಬ್ಯಾಟ್ ಮಂಕಾಗಿದೆ. ಫಿಟ್​​ನೆಸ್ ಹಾಗೂ ಸತತ ಬ್ಯಾಟಿಂಗ್ ವೈಫಲ್ಯದಿಂದ ರೋಹಿತ್ ಟೀಕೆಗೂ ಗುರಿಯಾಗಿದ್ದಾರೆ. ಸದ್ಯ ಇಂಜುರಿಯಿಂದ ಬಾಂಗ್ಲಾ ನಡುವಿನ ಟೆಸ್ಟ್​ ಪಂದ್ಯದಿಂದ ಹೊರಗುಳಿದಿದ್ದಾರೆ. ಇತ್ತೀಚಿನ ಇನ್ನಿಂಗ್ಸ್​ಗಳಲ್ಲಿ ರೋಹಿತ್ ಬ್ಯಾಟಿಂಗ್​ನಿಂದ ನಿರೀಕ್ಷಿತ ಫಲಿತಾಂಶ ಬರುತ್ತಿಲ್ಲ. ಇದು ಕಳೆದ ಟಿ-20 ವಿಶ್ವಕಪ್​ನಲ್ಲಿ ಸಮಸ್ಯೆಯಾಗಿ ಕಂಡಿತ್ತು. ರೋಹಿತ್ ವೈಫಲ್ಯದಿಂದ ಆರಂಭಿಕ ವಿಕೆಟ್​ನಲ್ಲಿ ದೊಡ್ಡ ಮೊತ್ತದ ಜೊತೆಯಾಟಕ್ಕೆ ಹೊಡೆತ ಬಿದ್ದಿತ್ತು.

ಕಳೆದ ಐಪಿಎಲ್​ನಲ್ಲಿ ಗುಜರಾತ್ ಟೈಟಾನ್ಸ್​ ತಂಡದ ನಾಯಕತ್ವ ವಹಿಸಿಕೊಂಡ ಚೊಚ್ಚಲ ವರ್ಷದಲ್ಲೇ ಪಾಂಡ್ಯಾ ತಂಡವನ್ನು ಚಾಂಪಿಯನ್ ಆಗಿಸಿದ್ದರು. ಈ ಮೂಲಕ ತನ್ನ ನಾಯಕತ್ವ ಗುಣವನ್ನು ಸಾಬೀತುಪಡಿಸಿದ್ದರು. ಹೀಗಾಗಿ ಪಾಂಡ್ಯಾಗೆ ಭಾರತ ತಂಡದ ನಾಯಕತ್ವ ವಹಿಸುವುದು ಸೂಕ್ತ ಎಂಬಂತಹ ಚರ್ಚೆಗಳು ಬಿಸಿಸಿಐ ಅಂಗಳದಲ್ಲಿ ನಡೆದಿದೆ ಎನ್ನಲಾಗಿದೆ. ವರದಿಯ ಪ್ರಕಾರ ಬಿಸಿಸಿಐನ ಉನ್ನತ ಅಧಿಕಾರಿಗಳು ಏಕದಿನ ಮತ್ತು ಟಿ-20 ತಂಡದ ನಾಯಕತ್ವ ವಹಿಸಿಕೊಳ್ಳುವಂತೆ ಪಾಂಡ್ಯಾ ಬಳಿ ಕೇಳಿಕೊಂಡಿದ್ದಾರೆ. ಈ ಬಗ್ಗೆ ಯೋಚಿಸಲು ಇನ್ನಷ್ಟು ಸಮಯ ಬೇಕು ಎಂದು ಪಾಂಡ್ಯಾ ಹೇಳಿದ್ದಾರೆ ಎನ್ನಲಾಗಿದೆ.

ರೋಹಿತ್ ಶರ್ಮಾ 2023ರ ವಿಶ್ವಕಪ್‍ವರೆಗೆ ಏಕದಿನ ಮತ್ತು ಟೆಸ್ಟ್ ತಂಡದ ನಾಯಕರಾಗು ಮುಂದುವರಿಯುವ ನಿಶ್ಚಿತ. ಮುಂಬರುವ ಟಿ-20 ವಿಶ್ವಕಪ್ ದೃಷ್ಟಿಯಿಂದ ಪಾಂಡ್ಯಾ ಟಿ-20 ನಾಯಕತ್ವವನ್ನು ವಹಿಸಕೊಳ್ಳುವುದು ಬಹುತೇಕ ಖಚಿತವಾಗಿದೆ. 2024ರ ಟಿ-20 ವಿಶ್ವಕಪ್‌ಗೆ ಟೀಂ ಇಂಡಿಯಾ ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದು, ಆಟಗಾರರ ಪ್ರದರ್ಶನದ ಬಗ್ಗೆ ಆಯ್ಕೆ ಸಮಿತಿ ಕಣ್ಣಿಟ್ಟಿದೆ. (ಏಜೆನ್ಸೀಸ್)