ಬೆಂಗಳೂರು: ವೆಸ್ಟ್ ಇಂಡೀಸ್ ವಿರುದ್ಧ ಟಿ20ಸರಣಿ ಸೋಲಿನ ಮುಖಭಂಗ ತಪ್ಪಿಸಿಕೊಳ್ಳಲು ಮೂರನೇ ಟಿ20 ಪಂದ್ಯದಲ್ಲಿ ಗೆಲ್ಲಲ್ಲೇ ಬೇಕಾದ ಒತ್ತಡದಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ಸೂರ್ಯ ಕುಮಾರ್ ಯಾದವ್ (83) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮೂರನೇ ಟಿ20ಯಲ್ಲಿ 7 ವಿಕೆಟ್‌ಗಳ ಗೆಲುವು ದಾಖಲಿಸಿ ಐದು ಪಂದ್ಯಗಳ ಸರಣಿಯನ್ನು 1-2 ರಿಂದ ಜೀವಂತವಿರಿಸಿದೆ. ಆದರೆ ನಾಯಕ ಹಾರ್ದಿಕ್ ಪಾಂಡ್ಯ ಸಿಡಿಸಿದ ಗೆಲುವಿನ ಸಿಕ್ಸರ್‌ಗೆ ಅಭಿಮಾನಿಗಳ ಜತೆಗೆ ಮಾಜಿ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸೂರ್ಯಕುಮಾರ್‌ಗೆ ಉತ್ತಮ ಸಾಥ್ ನೀಡಿದ ಯುವ ಬ್ಯಾಟರ್ ತಿಲಕ್ ವರ್ಮ (49*) ಸರಣಿಯಲ್ಲಿ ಸತತ ಎರಡನೇ ಅರ್ಧಶತಕಗಳಿಸುವ ಅವಕಾಶದಿಂದ ವಂಚಿತರಾದರು. ಇದಕ್ಕೆ ಹಾರ್ದಿಕ್ ಪಾಂಡ್ಯ ಸಿಡಿಸಿದ ಸಿಕ್ಸರ್ ಕಾರಣ ಎಂದು ಅಭಿಮಾನಿಗಳು ಟೀಕೆ ಮಾಡಿದ್ದಾರೆ. ಭಾರತದ ಗೆಲುವಿಗೆ 14 ಎಸೆತಗಳಲ್ಲಿ ಕೇವಲ 2 ರನ್ ಅಗತ್ಯವಿದ್ದಾಗ ತಿಲಕ್ ವರ್ಮ (49*) ನಾನ್ ಸ್ಟ್ರೈಕ್‌ನಲ್ಲಿದ್ದರು. ಸ್ಟ್ರೈಕ್‌ನಲ್ಲಿದ್ದ ನಾಯಕ ಹಾರ್ದಿಕ್ ಪಾಂಡ್ಯ ಸಿಕ್ಸರ್ ಸಿಡಿಸಿ ಟೀಮ್ ಇಂಡಿಯಾ ಗೆಲುವು ಖಾತ್ರಿಗೊಳಿಸಿದರು. ಇದು ದ್ವಿಪಕ್ಷೀಯ ಸರಣಿಯಾಗಿದ್ದು ನೆಟ್ ರನ್‌ರೇಟ್‌ನ ಅವಶ್ಯಕತೆ ಇರಲಿಲ್ಲ. ಪಾಂಡ್ಯ ಸಿಂಗಲ್ ನೀಡಿ ಯುವ ಬ್ಯಾಟರ್ ತಿಲಕ್ ವರ್ಮ ಅವರಿಗೆ ಅರ್ಧಶತಕ ಪೂರೈಸಲು ಅವಕಾಶ ನೀಡಬಹುದಿತ್ತು ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊರ್ವ ಆಟಗಾರ ರ್ಇಾನ್ ಪಠಾಣ್, ಸುಲಭ ಕೆಲಸ ನಾನು ಮಾಡುವೆ, ಕಷ್ಟದ ಕಾರ್ಯವನ್ನು ನೀವು ಮಾಡಿ ಎಂದು ಪಾಂಡ್ಯರನ್ನು ಕಿಚಾಯಿಸಿದ್ದಾರೆ.
ಈ ಹಿಂದೆ 2014ರಲ್ಲಿ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿೈನಲ್‌ನಲ್ಲಿ ವಿರಾಟ್ ಕೊಹ್ಲಿಗಾಗಿ ಎಂಎಸ್ ಧೋನಿ ಮಾಡಿದ ತ್ಯಾಗವನ್ನು ಅಭಿಮಾನಿಗಳು ನೆನಪಿಸಿಕೊಂಡಿದ್ದಾರೆ. ಪಂದ್ಯದ ಗೆಲುವಿಗೆ 1 ರನ್ ಅವಶ್ಯವಿದ್ದಾಗ ಕ್ರೀಸ್‌ಗೆ ಆಗಮಿಸಿದ ಧೋನಿ, ಓವರ್‌ನ ಕೊನೆ ಎಸೆತದಲ್ಲಿ ರನ್ ಓಡಲು ನಿರಾಕರಿಸಿ ಮುಂದಿನ ಓವರ್‌ನಲ್ಲಿ ಜಯದ ರನ್ ಬಾರಿಸಲು ಕೊಹ್ಲಿಗೆ ಅವಕಾಶ ನೀಡಿದರು. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಭರ್ಜರಿ ಅರ್ಧಶತಕ ಸಿಡಿಸಿ ಟೀಮ್ ಇಂಡಿಯಾದ ಗೆಲುವಿಗೆ ಬಲ ತುಂಬಿದ್ದರು.