ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಜನಪ್ರಿಯ ಮಾಡೆಲ್ ನತಾಶಾ ಸ್ಟಾಂಕೋವಿಕ್ ತಮ್ಮ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಪೂರ್ಣ ವಿರಾಮ ಘೋಷಿಸಿದ್ದಾರೆ. ಜುಲೈ 18ರಂದು ಸಾಮಾಜಿಕ ಜಾಲತಾಣದ ಮೂಲಕ ಇಬ್ಬರು ತಮ್ಮ ವಿಚ್ಛೇದನವನ್ನು ಖಚಿತಪಡಿಸುವ ಮೂಲಕ ಡಿವೋರ್ಸ್ ವದಂತಿಗಳು ನಿಜ ಎಂದು ಒಪ್ಪಿಕೊಂಡರು. ಡಿವೋರ್ಸ್ ಬೆನ್ನಲ್ಲೇ ನತಾಶಾ ದೇಶ ತೊರೆದಿದ್ದಾರೆ ಎಂಬ ಸುದ್ದಿಯಾಯಿತು. ಇತ್ತ ಕ್ರಿಕೆಟ್ನಲ್ಲಿ ಬಿಜಿಯಾಗಿದ್ದ ಹಾರ್ದಿಕ್ ಪಾಂಡ್ಯ, ಸದ್ಯ ಕೊಂಚ ವಿರಾಮ ಪಡೆದಿದ್ದು, ಜಾಲಿ ಮೂಡ್ನಲ್ಲಿದ್ದಾರೆ.
ತಾಜಾ ಸಂಗತಿ ಏನೆಂದರೆ, ಹಾರ್ದಿಕ್ ಪಾಂಡ್ಯ ಅವರು ಬ್ರಿಟಿಷ್ ಗಾಯಕಿ ಮತ್ತು ನಟಿ ಜಾಸ್ಮಿನ್ ವಾಲಿಯಾ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹರದಾಡುತ್ತಿದೆ. ಇಬ್ಬರು ಒಂದೇ ಪ್ರವಾಸಿ ತಾಣದಲ್ಲಿ ಕಾಣಿಸಿಕೊಂಡಿರುವುದು ಈ ವದಂತಿಗಳಿಗೆ ಪುಷ್ಠಿ ನೀಡಿದೆ. ಇದಕ್ಕೂ ಮುನ್ನ ಹಾರ್ದಿಕ್ ಹೆಸರು ನಟಿ ಅನನ್ಯಾ ಪಾಂಡ್ಯ ಜತೆ ತಳುಕು ಹಾಕಿಕೊಂಡಿತ್ತು.
ಅಂದಹಾಗೆ ಜಾಸ್ಮಿನ್ ವಾಲಿಯಾ ಅವರ ಕೆಲವು ಪೋಸ್ಟ್‌ಗಳನ್ನು ಹಾರ್ದಿಕ್ ಲೈಕ್ ಮಾಡಿದ ಬಳಿಕ ವದಂತಿಗಳು ಹುಟ್ಟಿಕೊಂಡವು. ಶ್ರೀಲಂಕಾ ಸರಣಿಯ ನಂತರ ಇದೀಗ ಹಾರ್ದಿಕ್ ಪಾಂಡ್ಯ ಮತ್ತು ಜಾಸ್ಮಿನ್ ಒಟ್ಟಿಗೆ ರಜೆಯ ಮೇಲೆ ಪ್ರವಾಸಿ ತಾಣ ಗ್ರೀಸ್‌ಗೆ ಹೋಗಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ವೈರಲ್ ಫೋಟೋಗಳು ಕೂಡ ಅದಕ್ಕೆ ಸಾಕ್ಷಿಯಂತಿವೆ.
ಶ್ರೀಲಂಕಾ ಸರಣಿ ವೇಳೆ ಇದೇ ಜಾಸ್ಮಿನ್ ಕ್ರೀಡಾಂಗಣದಲ್ಲಿಯೂ ಕಾಣಿಸಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ಹಾರ್ದಿಕ್ ಮತ್ತು ಜಾಸ್ಮಿನ್ ಇಬ್ಬರೂ ಗ್ರೀಸ್ನಲ್ಲಿ ಮೋಜು-ಮಸ್ತಿ ಮಾಡುತ್ತಿರುವ ಪೋಸ್ಟ್‌ಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಗಳಲ್ಲಿ ಒಂದೇ ಸಮಯದಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ಒಟ್ಟಿಗೆ ಇರದಿದ್ದರೂ ಒಂದೇ ಸಮಯದಲ್ಲಿ ಒಂದೇ ಸ್ಥಳದಲ್ಲಿರುವ ಫೋಟೋಗಳನ್ನು ಹಂಚಿಕೊಂಡಿರುವುದು ವದಂತಿಗಳಿಗೆ ಕಾರಣವಾಗಿದೆ.
ಎಲ್ಲಕ್ಕಿಂತ ಹೆಚ್ಚಾಗಿ, ಹಾರ್ದಿಕ್ ಮತ್ತು ಜಾಸ್ಮಿನ್ ಇಬ್ಬರೂ ಪ್ರತ್ಯೇಕವಾಗಿ ಈಜುಕೊಳದ ಮುಂದೆ ಪೋಸ್ ನೀಡಿದ್ದಾರೆ. ಇಬ್ಬರೂ ಒಂದೇ ಸ್ಥಳದಲ್ಲಿ, ಒಂದೇ ಸಮಯದಲ್ಲಿ ಇದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳನ್ನು ಸಿಕ್ಕಿದ್ದು, ಡೇಟಿಂಗ್ ವದಂತಿ ಬಲವಾಗಿದೆ. ಫೋಟೋಗಳು ವೈರಲ್ ಆಗುತ್ತಿದ್ದಂತೆ ನತಾಶಾ ಜತೆಗಿನ ಡಿವೋರ್ಸ್ಗೆ ಈಕೆಯೇ ಕಾರಣ ಇರಬಹುದು ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
ಜಾಸ್ಮಿನ್ ವಾಲಿಯಾ ಯಾರು? ಜಾಸ್ಮಿನ್ ವಾಲಿಯಾ ಬ್ರಿಟಿಷ್ ಗಾಯಕಿ ಮತ್ತು ಕಿರುತೆರೆ ನಟಿ. ಇಂಗ್ಲೆಂಡ್‌ನ ಎಸೆಕ್ಸ್‌ನಲ್ಲಿ ಭಾರತೀಯ ಮೂಲದ ಕುಟುಂಬದಲ್ಲಿ ಜನಿಸಿದರು. ಕಳೆದ ಒಂದು ದಶಕದಿಂದ ಬ್ರಿಟಿಷ್ ಸಂಗೀತ ಮತ್ತು ದೂರದರ್ಶನ ಉದ್ಯಮದಲ್ಲಿ ತಮ್ಮದೇಯಾದ ಅಲೆಗಳನ್ನು ಸೃಷ್ಟಿಸುತ್ತಿದ್ದಾರೆ. ಜಾಸ್ಮಿನ್ ಅವರು "ದಿ ಓನ್ಲಿ ವೇ ಈಸ್ ಎಸೆಕ್ಸ್" ಬ್ರಿಟಿಷ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದಾಗ ಬಳಿಕ ಗ್ರೇಟ್ ಬ್ರಿಟನ್‌ನಲ್ಲಿ ಅವರ ಹೆಸರು ಪ್ರಸಿದ್ಧವಾಯಿತು. 2014ರ ಸುಮಾರಿಗೆ ಜಾಸ್ಮಿನ್ ವಾಲಿಯಾ ತನ್ನದೇಯಾದ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದರು. ಆಲಿ ಗ್ರೀನ್ ಮ್ಯೂಸಿಕ್, ಝಾಕ್ ನೈಟ್ ಮತ್ತು ಇಂಟೆನ್ಸ್-ಟಿ ಅವರ ಸಹಯೋಗವನ್ನು ಒಳಗೊಂಡಂತೆ ಯೂಟ್ಯೂಬ್ ಚಾನಲ್‌ನಲ್ಲಿ ಅವರ ಜನಪ್ರಿಯ ಹಾಡುಗಳು ಮತ್ತು ವಿಡಿಯೋಗಳನ್ನು ಬಿಡುಗಡೆ ಮಾಡಿದರು. ಜಾಸ್ಮಿನ್ ಅವರು ಝಾಕ್ ನೈಟ್ ಜೊತೆ ಹಾಡಿದ "ಬೊಮ್ ಡಿಗ್ಗಿ" ಎಂಬ ಹಾಡು ಸಿಕ್ಕಾಪಟ್ಟೆ ಹಿಟ್ ಆಯಿತು.