ಮುಂಬೈ: ಕಳೆದ ಆವೃತ್ತಿಯಲ್ಲಿ ಮರಳಿದ್ದ ಹಾರ್ದಿಕ್ ಪಾಂಡ್ಯಗೆ ಅಚ್ಚರಿಯ ರೀತಿಯಲ್ಲಿ ನಾಯಕತ್ವ ನೀಡಿದರೂ, ಮುಂಬೈ ಇಂಡಿಯನ್ಸ್ ತಂಡ ಅಂಕಪಟ್ಟಿಯಲ್ಲಿ ಕೊನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ನಾಯಕತ್ವದಿಂದ ಕೆಳಗಿಳಿಸಿದ್ದಕ್ಕೆ ರೋಹಿತ್ ಶರ್ಮ ಗರಂ ಆಗಿದ್ದಾರೆ ಎಂದೂ ವರದಿಯಾಗಿತ್ತು. ಭಾರತ ಟೆಸ್ಟ್ ತಂಡದ ನಾಯಕರಾಗಿರುವ ಸೂರ್ಯಕುಮಾರ್ಗೆ ಈ ಬಾರಿ ಮುಂಬೈ ನಾಯಕತ್ವವೂ ಒಲಿಯಲಿದೆ ಎಂದು ವರದಿಯಾಗಿತ್ತು. ಇವೆಲ್ಲದರ ನಡುವೆ ಈಗ ಹಾರ್ದಿಕ್ ಪಾಂಡ್ಯ ಅವರೇ 2025ರ ಐಪಿಎಲ್ ಆವೃತ್ತಿಯಲ್ಲೂ ಮುಂಬೈ ನಾಯಕರಾಗಿ ಮುಂದುವರಿಯುವುದು ಖಚಿತಗೊಂಡಿದೆ.
ಇನ್ನು ಬುಮ್ರಾ ಮುಂಬೈ ತಂಡದ ಮೊದಲ ಆಯ್ಕೆಯ ರಿಟೇನ್ ಆಗಿ ಗರಿಷ್ಠ 18 ಕೋಟಿ ರೂ. ಪಡೆದಿದ್ದಾರೆ. ರೋಹಿತ್ ಶರ್ಮ 4ನೇ ರಿಟೇನ್ ಆಗಿದ್ದಾರೆ. ಮುಂಬೈ ್ರಾಂಚೈಸಿ ಬಿಡುಗಡೆಗೊಳಿಸಿರುವ ವಿಡಿಯೋದಲ್ಲಿ ಇದನ್ನು ಸಮರ್ಥಿಸಿಕೊಂಡಿರುವ ರೋಹಿತ್, ನಾನೀಗ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿರುವುದರಿಂದ 4ನೇ ರಿಟೇನ್ ಆಗಿರುವುದು ಸರಿಯಾಗಿಯೇ ಇದೆ. ರಾಷ್ಟ್ರೀಯ ತಂಡದ ಪರ ಆಡುವವರಿಗೆ ಯಾವಾಗಲೂ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದಿದ್ದಾರೆ.
ಮುಂಬೈ ಪರ ರಿಟೇನ್ ಆಗಿರುವ ಎಲ್ಲ 5 ಆಟಗಾರರು ಫೋಟೋಶೂಟ್ನಲ್ಲಿ ಜತೆಯಾಗಿ ಕಾಣಿಸಿಕೊಳ್ಳುವ ಮೂಲಕ ತಂಡದ ಒಗ್ಗಟ್ಟನ್ನೂ ಪ್ರದರ್ಶಿಸಿದ್ದಾರೆ. 5 ಆಟಗಾರರ ರಿಟೇನ್ಗೆ ಗರಿಷ್ಠ 75 ಕೋಟಿ ರೂ. ವ್ಯಯಿಸಿರುವ ಮುಂಬೈ ಬಳಿ ಹರಾಜಿನ ಖರ್ಚಿಗೆ 45 ಕೋಟಿ ರೂ. ಮಾತ್ರ ಇದೆ.