ಕ್ರೀಡೆ

ಹಾರ್ದಿಕ್​ ಪಾಂಡ್ಯ ಪುತ್ರನಿಗೆ 1 ತಿಂಗಳ ಸಂಭ್ರಮ, ವಿಶೇಷ ಚಿತ್ರ ಹಂಚಿಕೊಂಡ ನತಾಶಾ

ಮುಂಬೈ: ಟೀಮ್​ ಇಂಡಿಯಾ ಮತ್ತು ಮುಂಬೈ ಇಂಡಿಯನ್ಸ್​ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಮತ್ತು ನಟಿ ನತಾಶಾ ಸ್ಟಾಂಕೋವಿಕ್​ ದಂಪತಿಯ ಪುತ್ರನಿಗೆ ಭಾನುವಾರ ಒಂದು ತಿಂಗಳು ಪೂರ್ಣಗೊಂಡ ಸಂಭ್ರಮ. ಜುಲೈ 30ರಂದು ಜನಿಸಿದ ಪುತ್ರನಿಗೆ ಈಗಾಗಲೆ ಅಗಸ್ತ್ಯ ಎಂದು ನಾಮಕರಣ ಮಾಡಲಾಗಿದ್ದು, ಮಗುವಿನೊಂದಿಗೆ ಪೋಸ್​ ನೀಡುತ್ತ ನತಾಶಾ ಅವರು 1 ತಿಂಗಳ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ಹಾರ್ದಿಕ್​ ಪಾಂಡ್ಯ ಈಗಾಗಲೆ ಐಪಿಎಲ್​ ಟೂರ್ನಿಗಾಗಿ ಯುಎಇಗೆ ತೆರಳಿದ್ದಾರೆ. ಹೀಗಾಗಿ ನತಾಶಾ ಮತ್ತು ಅಗಸ್ತ್ಯ ಇಬ್ಬರೂ ಹಾರ್ದಿಕ್​ ಪಾಂಡ್ಯರನ್ನು ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನತಾಶಾ ಅವರು, 'ಅಗಸ್ತ್ಯನಿಗೆ ಒಂದು ತಿಂಗಳು, ನಾವು ನಿಮ್ಮನ್ನು ಪ್ರೀತಿಸುತ್ತೇವೆ ಹಾರ್ದಿಕ್​ ಪಾಂಡ್ಯ' ಎಂದು ಬರೆದು, ಹಾರ್ದಿಕ್​ ಪಾಂಡ್ಯ ಚಿತ್ರದೆದುರು ಮಗುನೊಂದಿಗೆ ನಿಂತಿರುವ ಚಿತ್ರವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.

ನಸುಗೆಂಪು ಬಣ್ಣದ ಪೋಲ್ಕ ಡ್ರೆಸ್​​ನಲ್ಲಿ ನತಾಶಾ ಕಾಣಿಸಿಕೊಂಡಿದ್ದಾರೆ. ಅಬುಧಾಬಿಯಲ್ಲಿರುವ ಹಾರ್ದಿಕ್​ ಪಾಂಡ್ಯ ಅವರು ಈಗಾಗಲೆ ಪತ್ನಿ ಮತ್ತು ಮಗುವನ್ನು ಮಿಸ್​ ಮಾಡಿಕೊಳ್ಳುತ್ತಿದ್ದು, ಅವರಿಬ್ಬರೊಂದಿಗೆ ವಿಡಿಯೋ ಕಾಲ್​ನಲ್ಲಿ ಮಾತನಾಡುತ್ತಿರುವ ಚಿತ್ರವನ್ನೂ ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡು, 'ಮಿಸ್ಸಿಂಗ್​ ಮೈ 2 ಏಂಜಲ್ಸ್​. ನಿಮ್ಮಿಬ್ಬರನ್ನು ನನ್ನ ಜೀವನದಲ್ಲಿ ಪಡೆದುಕೊಂಡಿರುವುದು ನನ್ನ ಭಾಗ್ಯ' ಎಂದು ಬರೆದಿದ್ದರು.