ನವದೆಹಲಿ: ಭಾರತ ಕ್ರಿಕೆಟ್ ತಂಡದ ಲೆಜೆಂಡರಿ ಆಟಗಾರರಾದ ಮಹೇಂದ್ರ ಸಿಂಗ್ ಧೋನಿ (MS Dhoni) ಹಾಗೂ ಹರ್ಭಜನ್ ಸಿಂಗ್ (Harbhajan Singh) ಎರಡು ವಿಶ್ವಕಪ್ ಗೆಲುವಿನಲ್ಲಿ ತಂಡದ ಭಾಗವಾಗಿದ್ದರು. 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹರ್ಭಜನ್ ಸಿಂಗ್ (Harbhajan Singh) ಮಹೇಂದ್ರ ಸಿಂಗ್ ಧೋನಿ ಅವರೊಟ್ಟಿಗೆ ಮಾತನಾಡಿ 10 ವರ್ಷಗಳು ಕಳೆದಿವೆಯಂತೆ. ಈ ವಿಚಾರ ಇದೀಗ ಕ್ರೀಡಾ ವಲಯದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು, ಯಾವ ಕಾರಣಕ್ಕೆ ಇವರಿಬ್ಬರು ಮಾತನಾಡುವುದನ್ನು ಬಿಟ್ಟಿದ್ದಾರೆ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಹರ್ಭಜನ್ ಸಿಂಗ್, ಇಬ್ಬರ ನಡುವೆ ಯಾವುದೇ ಸ್ನೇಹವಿಲ್ಲ, ಈಗ ಧೋನಿ ಜೊತೆ ಮಾತನಾಡುತ್ತಿಲ್ಲ. 10 ವರ್ಷಗಳಾಯಿತು ನಾವಿಬ್ಬರೂ ಮಾತನಾಡಿಲ್ಲ. ಕಾರಣಗಳೇನು ಎಂಬುದು ನನಗೆ ಗೊತ್ತಿಲ್ಲ. ನಾವು ಐಪಿಎಲ್‌ನಲ್ಲಿ ಸಿಎಸ್‌ಕೆಯಲ್ಲಿ ಆಡುವಾಗ, ನಾವು ಮಾತನಾಡುತ್ತಿದ್ದೆವು, ಅದು ಕೂಡ ಮೈದಾನಕ್ಕೆ ಸೀಮಿತವಾಗಿತ್ತು. ಪಂದ್ಯ ಮುಗಿದ ನಂತರ ನಾವು ಮಾತನಾಡುತ್ತಿರಲಿಲ್ಲ.
ಸಂಬಂಧ ಎಂದರೆ ಕೊಡುವುದು ಮತ್ತು ತೆಗೆದುಕೊಳ್ಳುವುದು. ನಾನು ನಿಮ್ಮನ್ನು ಗೌರವಿಸಿದರೆ, ನೀವು ನನ್ನನ್ನು ಗೌರವಿಸುತ್ತೀರಿ ಎಂದು ನಾನು ನಿರೀಕ್ಷಿಸುತ್ತೇನೆ. ಅದೇ ರೀತಿ ಕರೆ ಮಾಡಿದಾಗ ಉತ್ತರಿಸದಿದ್ದರೆ ಆನಂತರ ಒಂದೆರೆಡು ಬಾರಿ ಪ್ರಯತ್ನಿಸುತ್ತೇವೆ. ಅದನ್ನು ಬಿಟ್ಟು ನಿರಂತರವಾಗಿ ಕರೆ ಮಾಡಲು ಹೋಗುವುದಿಲ್ಲ. ಹೀಗಾಗಿ ನನ್ನ ಕರೆಗೆ ಪ್ರತಿಕ್ರಿಯಿಸುವವರೊಂದಿಗೆ ಮಾತ್ರ ನಾನು ಸಂಪರ್ಕ ಇಟ್ಟುಕೊಳ್ಳುತ್ತೇನೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ತಮ್ಮ ಹೇಳಿಕೆ ವೈರಲ್ ಆದ ಬೆನ್ನಲ್ಲೇ ಟ್ವೀಟ್ ಮಾಡಿರುವ ಹರ್ಭಜನ್, ಅಪರಿಚಿತರು ಆತ್ಮೀಯರಾಗುತ್ತಾರೆ. ಆತ್ಮೀಯರು ಅಪರಿಚಿತರು ಆಗುತ್ತಾರೆ ಎಂದು ಟ್ವೀಟ್ ಮಾಡುವ ಧೋನಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಈ ಟ್ವೀಟ್ ಸಖತ್ ಸೌಂಡ್ ಮಾಡುತ್ತಿದ್ದು, ಅಷ್ಟಕ್ಕೂ ಹರ್ಭಜನ್ ಹಾಗೂ ಧೋನಿ ನಡುವೆ ಬಿರುಕು ಮೂಡಲು ಕಾರಣವೇನು ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.