ಕ್ರೀಡೆ

ವಿರಾಟ್ ಕೊಹ್ಲಿಗೆ ಇಂದು 32ನೇ ಜನ್ಮದಿನದ ಸಂಭ್ರಮ

ಬೆಂಗಳೂರು: ಟೀಮ್ ಇಂಡಿಯಾ ಹಾಗೂ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿಗೆ ಗುರುವಾರ 32ನೇ ಜನ್ಮದಿನದ ಸಂಭ್ರಮ. ವಿಶ್ವದ ಸ್ಟಾರ್ ಬ್ಯಾಟ್ಸ್‌ಮನ್ ಆಗಿ ಹಲವಾರು ಬ್ಯಾಟಿಂಗ್ ದಾಖಲೆಗಳನ್ನು ಈಗಾಗಲೆ ತನ್ನ ಹೆಸರಿಗೆ ಬರೆಸಿಕೊಂಡಿರುವ ವಿರಾಟ್ ಕೊಹ್ಲಿ, ಈ ಬಾರಿ ಆರ್‌ಸಿಬಿ ತಂಡಕ್ಕೆ ಐಪಿಎಲ್‌ನಲ್ಲಿ ಪ್ರಶಸ್ತಿ ಗೆಲ್ಲಿಸಿಕೊಡುವ ಹುರುಪಿನಲ್ಲಿದ್ದಾರೆ. ಅವರ ಜನ್ಮದಿನದ ಹಿನ್ನೆಲೆಯಲ್ಲಿ ಕ್ರಿಕೆಟ್ ವಲಯ ಮತ್ತು ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

1988ರ ನವೆಂಬರ್ 5ರಂದು ನವದೆಹಲಿಯಲ್ಲಿ ಜನಿಸಿದ ವಿರಾಟ್ ಕೊಹ್ಲಿ, 2008ರಲ್ಲಿ ಭಾರತ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಭಾರತ ಪರ 86 ಟೆಸ್ಟ್‌ಗಳಲ್ಲಿ 27 ಶತಕಗಳ ಸಹಿತ 7,240 ರನ್ ಬಾರಿಸಿರುವ ಅವರು, 248 ಏಕದಿನ ಪಂದ್ಯದಲ್ಲಿ 11,867 ರನ್ ಸಿಡಿಸಿದ್ದಾರೆ. ಇದರಲ್ಲಿ 43 ಶತಕಗಳು ಸೇರಿವೆ. ಭಾರತ 82 ಟಿ20 ಪಂದ್ಯಗಳನ್ನೂ ಆಡಿದ್ದು, 2794 ರನ್ ಸಿಡಿಸಿದ್ದಾರೆ.

ಶುಕ್ರವಾರ ಐಪಿಎಲ್‌ನಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ಆಡಲಿರುವ ವಿರಾಟ್ ಕೊಹ್ಲಿ, ಜನ್ಮದಿನಕ್ಕೆ ಆರ್‌ಸಿಬಿ ತಂಡದಿಂದ ಗೆಲುವಿನ ಉಡುಗೊರೆಯ ನಿರೀಕ್ಷೆಯಲ್ಲಿದ್ದಾರೆ. ಮುಂಬರುವ ಆಸ್ಟ್ರೇಲಿಯಾ ಪ್ರವಾಸದ ಮೂಲಕ ವಿರಾಟ್ ಕೊಹ್ಲಿ, ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.