ಕ್ರೀಡೆ

ರೋಹಿತ್ ಶರ್ಮಗೆ ಭಾರತ ತಂಡಕ್ಕಿಂತ ಐಪಿಎಲ್ ಮುಖ್ಯವಾಯಿತೇ?

ಪ್ರಸಾದ್​ ಶೆಟ್ಟಿಗಾರ್​

ನವದೆಹಲಿ: ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಫಿಟ್ನೆಸ್ ಸಮಸ್ಯೆಯಿಂದಾಗಿ ಅಲಭ್ಯರಾಗಿರುವ ಅನುಭವಿ ಬ್ಯಾಟ್ಸ್‌ಮನ್ ರೋಹಿತ್ ಶರ್ಮ, ಐಪಿಎಲ್ 13ನೇ ಆವೃತ್ತಿಯಿಂದಲೂ ಹೊರಬಿದ್ದಿದ್ದಾರೆ ಎಂಬುದೇ ಕ್ರಿಕೆಟ್ ವಲಯದ ನಂಬಿಕೆಯಾಗಿತ್ತು. ಆದರೆ ಮಂಗಳವಾರದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುವ ಮೂಲಕ ರೋಹಿತ್ ಶರ್ಮ ಗೊಂದಲ ಮೂಡಿಸಿದ್ದಾರೆ. ಐಪಿಎಲ್‌ನಲ್ಲಿ ಆಡಲು ಫಿಟ್ ಇದ್ದರೆ ಭಾರತ ತಂಡಕ್ಕೆ ಹೇಗೆ ಅಲಭ್ಯರಾದರು ಅಥವಾ ಭಾರತ ತಂಡದ ಪರ ಆಡಲು ಫಿಟ್ ಇಲ್ಲದಿದ್ದರೆ ಐಪಿಎಲ್‌ನಲ್ಲಿ ಹೇಗೆ ಆಡಿದರು ಎಂಬ ಗೊಂದಲ ಸೃಷ್ಟಿಯಾಗಿದೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಂಗಳವಾರ ಮಧ್ಯಾಹ್ನವಷ್ಟೇ ಮಾಧ್ಯಮದೊಂದಿಗೆ ಮಾತನಾಡಿ, ‘ರೋಹಿತ್ ಗಾಯಗೊಂಡಿದ್ದಾರೆ. ಅವರು ಸಂಪೂರ್ಣ ಫಿಟ್ ಇಲ್ಲ. ಇಲ್ಲದಿದ್ದರೆ ಅವರಂಥ ಆಟಗಾರರನ್ನು ಯಾಕೆ ಭಾರತ ತಂಡದಿಂದ ಕೈಬಿಡುತ್ತಿದ್ದೆವು?’ ಎಂದಿದ್ದರು. ಜತೆಗೆ ರೋಹಿತ್ ಶರ್ಮ ಸುದೀರ್ಘ ವೃತ್ತಿಜೀವನ ಹೊಂದಿದ್ದಾರೆ. ಈ ಐಪಿಎಲ್ ಅಥವಾ ಮುಂದಿನ ಸರಣಿಗೆ ಅವರ ಆಟ ಮುಗಿಯುವುದಿಲ್ಲ. ಮರಳಿ ಕಣಕ್ಕಿಳಿಯುವ ಮುನ್ನ ಅವರು ಈ ಬಗ್ಗೆ ಯೋಚಿಸಬೇಕು ಎಂದೂ ರೋಹಿತ್‌ಗೆ ಸಲಹೆ ನೀಡಿದ್ದರು. ಆದರೆ ರೋಹಿತ್ ಮಂಗಳವಾರ ರಾತ್ರಿಯ ವೇಳೆಗೆ ಮುಂಬೈ ಪರ ಕಣಕ್ಕಿಳಿಯುವ ಮೂಲಕ, ಗಂಗೂಲಿ ಸಲಹೆಯನ್ನೂ ತಿರಸ್ಕರಿಸಿದಂತಿತ್ತು. ಅಲ್ಲದೆ ಪಂದ್ಯದ ಬಳಿಕ ಮಾತನಾಡಿದ 33 ವರ್ಷದ ರೋಹಿತ್, ‘ಸ್ನಾಯುಸೆಳೆತದ ಸಮಸ್ಯೆಯಿಂದ ಮುಕ್ತನಾಗಿರುವೆ. ಮುಂದಿನ ಕೆಲ ಪಂದ್ಯಗಳಲ್ಲೂ ಆಡುವುದನ್ನು ಎದುರು ನೋಡುತ್ತಿರುವೆ’ ಎಂದರು.

ಗಾಯ ಮರುಕಳಿಸುವ ಅಪಾಯದಿಂದಲೇ ರೋಹಿತ್‌ರನ್ನು ಆಯ್ಕೆಗಾರರು ಕೈಬಿಟ್ಟಿದ್ದಾರೆ ಎಂದು ಭಾರತ ತಂಡದ ಕೋಚ್ ರವಿಶಾಸಿ ಕೂಡ ಈ ಮುನ್ನ ಹೇಳಿದ್ದರು. ಹಾಗಾದರೆ ರೋಹಿತ್ ಎಲ್ಲರ ಎಚ್ಚರಿಕೆಗಳನ್ನು ಮೀರಿ ಮರಳಿ ಕಣಕ್ಕಿಳಿದರೇ ಎಂಬ ಪ್ರಶ್ನೆ ಎದ್ದಿದೆ.

ಐಪಿಎಲ್ ಅಷ್ಟು ಮುಖ್ಯವೇ, ಮಾಜಿಗಳ ಪ್ರಶ್ನೆ

ರೋಹಿತ್ ಶರ್ಮ ನಡೆಯಿಂದ ಮತ್ತೆ ‘ಕ್ಲಬ್ ವರ್ಸಸ್ ಕಂಟ್ರಿ’ ಚರ್ಚೆ ಭುಗಿಲೆದ್ದಿದೆ. ದೇಶದ ಪರ ಆಡುವುದಕ್ಕಿಂತ ರೋಹಿತ್‌ಗೆ ಐಪಿಎಲ್ ಹೆಚ್ಚು ಮುಖ್ಯವಾಯಿತೇ ಎಂಬ ಪ್ರಶ್ನೆಯೂ ಎದ್ದಿದೆ. ರೋಹಿತ್ ವಿರುದ್ಧ ಬಿಸಿಸಿಐ ಕ್ರಮ ತೆಗೆದುಕೊಳ್ಳುವುದೇ ಅಥವಾ ರೋಹಿತ್ ಗಾಯದ ಸಮಸ್ಯೆಯನ್ನು ಅಂದಾಜಿಸುವಲ್ಲಿ ಬಿಸಿಸಿಐ ಫಿಸಿಯೋಗಳು ಎಡವಿದರೇ ಎಂದು ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್ಸರ್ಕಾರ್ ಪ್ರಶ್ನಿಸಿದ್ದಾರೆ. ಮತ್ತೋರ್ವ ಮಾಜಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಕೂಡ, ರೋಹಿತ್ ಗಾಯದ ವಿಚಾರವನ್ನು ನಿಭಾಯಿಸುವಲ್ಲಿ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಎಡವಿದೆ ಎಂದಿದ್ದಾರೆ. ರೋಹಿತ್ ಗಾಯದ ಬಗ್ಗೆ ಪೂರ್ಣ ಮಾಹಿತಿ ಇರದಿದ್ದರೆ ಅವರನ್ನು ತಂಡದಲ್ಲಿ ಇಟ್ಟುಕೊಳ್ಳಬೇಕಾಗಿತ್ತು. ಗಾಯದಿಂದ ಆಡಲ್ಲ ಎಂಬುದು ಖಾತ್ರಿಯಾದಾಗ ಬದಲಿ ಆಟಗಾರರನ್ನು ಹೆಸರಿಸಬಹುದಿತ್ತು ಎಂದಿದ್ದಾರೆ.