ಮಲಪನಗುಡಿಯ ವಿದ್ಯಾರಣ್ಯಪೀಠದ ಹೈಸ್ಕೂಲ್ ಮೈದಾನದಲ್ಲಿ ನಿರ್ಮಿಸಲಾಗಿದ್ದ ಕುಸ್ತಿ ಅಖಾಡದಲ್ಲಿ ಸೆಣಸಾಡಿದ ಕುಸ್ತಿ ಪಟುಗಳು. (ಚಿತ್ರ: ನಾಗರೆಡ್ಡಿ ಹಡಗಲಿ) 
ಕ್ರೀಡೆ

ಹಂಪಿ ಉತ್ಸವದಲ್ಲಿ ಪೈಲ್ವಾನರ ಬೆವರಿಳಿಸಿದ ಕುಸ್ತಿ ಅಖಾಡ

ಮಂಜುನಾಥ ಅಯ್ಯಸ್ವಾಮಿ ಹಂಪಿ

ವಿಜಯನಗರ ಅರಸರ ಕೃಷ್ಣ ದೇವರಾಯ ಕೂಡ ಕುಸ್ತಿ ಪಟುಗಳಾಗಿದ್ದರು. ವಿವಿಧ ಕ್ರೀಡೆಗಳಿಗೆ ಪ್ರೋತ್ಸಾಹಿಸಲಾಗುತ್ತಿತ್ತು ಎಂದು ಜಿಲ್ಲಾಡಳಿತದಿಂದ ಹಂಪಿ ಉತ್ಸವ ನಿಮಿತ್ತ ಹೊಸ ಮಲಪನಗುಡಿಯ ವಿದ್ಯಾರಣ್ಯಪೀಠದ ಹೈಸ್ಕೂಲ್ ಮೈದಾನದಲ್ಲಿ ನಿರ್ಮಿಸಲಾಗಿದ್ದ ಕುಸ್ತಿ ಅಖಾಡದಲ್ಲಿ ಕುಸ್ತಿ ಸ್ಪರ್ಧೆ, ಕಲ್ಲು ಎತ್ತುವ ಸ್ಪರ್ಧೆ, ಬಂಡಿಗಾಲಿ ಜೋಡಿಸುವ ಗ್ರಾಮೀಣ ಕ್ರೀಡೆಗಳ ಸ್ಪರ್ಧೆ ನಡೆದಿದ್ದು, ಯುವ ಕ್ರೀಡಾಭಿಮಾನಿಗಳಿಗೆ ಸೆಳೆಯಿತು.

ಕುಸ್ತಿ ಸ್ಪರ್ಧೆಗಳು ನೋಡುಗರ ಮೈನವಿರೇಳಿಸಿದವು. ಸ್ಪರ್ಧೆಯಲ್ಲಿ ವಿವಿಧ ಪಟ್ಟುಗಳ ಮೂಲಕ ಪೈಲ್ವಾನರು ಪೈಪೋಟಿ ಸಾಧಿಸಲು ಪ್ರಯತ್ನಿಸಿದ ರೊಚಕ ದೃಶ್ಯಗಳನ್ನು ಸ್ಥಳೀಯರು, ಪ್ರವಾಸಿಗರು ನೋಡಿ ಸಂತಸ ಪಟ್ಟರು. ಕುಸ್ತಿ ಪಂದ್ಯಗಳು ವಿಜಯನಗರದ ಗತವೈಭವದ ಸಾಮ್ರಾಜ್ಯವನ್ನು ನೆನಪಿಸಿದವು.

ಒಟ್ಟು 4 ಕೆಟಗರಿಯಲ್ಲಿ ನಡೆದ ರಾಜ್ಯಮಟ್ಟದ ಪಾಯಿಂಟ್ ಕುಸ್ತಿಯಲ್ಲಿ ಪುರುಷರು- 31, ಮಹಿಳೆಯರು 25, ಜಿಲ್ಲಾ ಮಟ್ಟದ ಪುರುಷರ ಚಿತ್ ಕುಸ್ತಿ ವಿಭಾಗದಲ್ಲಿ 31 ಸೇರಿ ಒಟ್ಟು 82 ಸ್ಪರ್ಧಿಗಳು ಭಾಗವಹಿಸಿದ್ದರು. ರಾಜ್ಯ ಮತ್ತು ಅಂತರರಾಷ್ಟ್ರೀಯ ಖ್ಯಾತಿಯ ಪೈಲ್ವಾನರು ತಮ್ಮ ಗೆಲುವಿಗಾಗಿ ಮದಗಜಗಳಂತೆ ಅಖಾಡದಲ್ಲಿ ಪೈಲ್ವಾನರ ಸೆಣಸಾಟ ನಿಬ್ಬೆರಗಾಗುವಂತೆ ಮಾಡಿದ್ದವು. ಸುತ್ತಲೂ ಸೇರಿದ್ದ ಪ್ರೇಕ್ಷಕರು ಶಿಳ್ಳೆ, ಕೇಕೆ, ಚಪ್ಪಾಳೆಯೊಂದಿಗೆ ಸಂಭ್ರಮಿಸಿದರು.

ಗ್ರಾಮೀಣ ಕ್ರೀಡೆಯ ಕುಸ್ತಿ ಪಂದ್ಯಾವಳಿಗೆ ಶಾಸಕ ಕೃಷ್ಣನಾಯ್ಕ ಮಾತನಾಡಿ, ಗಂಡು‌ಮೆಟ್ಟಿದ ನಾಡು ವಿಜಯನಗರ ಸಾಮ್ರಾಜ್ಯದ ನೆನಪಿಗೆಗಾಗಿ ಕುಸ್ತಿ ಪಂದ್ಯವಳಿ ಆಯೋಜನೆ ಮಾಡಲಾಗಿದೆ. ಸ್ಪರ್ಧೆಯಲ್ಲಿ ಸೋಲು ಗೆಲವು ಸಾಮಾನ್ಯ. ಕ್ರೀಡಾಪಟುಗಳು ಯಾವುದೇ ತೀರ್ಪು ಬಂದರು ಸಮಾನವಾಗಿ ಸ್ವೀಕರಿಸಬೇಕು ಎಂದರು.

ಶಾಸಕ ಎಚ್.ಆರ್.ಗವಿಯಪ್ಪ, ಡಿಸಿ ಎಂ.ಎಸ್.ದಿವಾಕರ, ಜಿ.ಪಂ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿ ಷಾ, ಹೂವಿನ ಹಡಗಲಿ ಇಒ ಎಂ.ಉಮೇಶ್ ಇತರರಿದ್ದರು.

ಶೇಖಪ್ಪನಿಗೆ ಗುಂಡೇತ್ತುವ ತಾಕತ್ತು ಹಂಪಿ ಉತ್ಸವದ ನಿಮಿತ್ತ ಹೊಸ ಮಲನಗುಡಿಯಲ್ಲಿ ನಡೆದ ಸಾಹಸ ಕ್ರೀಡೆಯಲ್ಲಿ ಒಂದಾದ ಭಾರದ ಗುಂಡು ಎತ್ತುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಒಟ್ಟು 4 ಸ್ಪರ್ಧಿಗಳು ಭಾಗವಹಿಸಿದರು.

ವಿಜಯಪುರ ಜಿಲ್ಲೆಯ ಮುದ್ದೆಬಿಹಾಳದ ಶೇಖಪ್ಪ ಬಸಪ್ಪ ಯಾಳವಾರ 155 ಕೆ.ಜಿ ತೂಕದ ಗುಂಡನ್ನು ಕೇವಲ 1.97 ನಿಮಿಷದಲ್ಲೇ ಎತ್ತಿ ಸಾಹಸ ಮೆರೆದು ಮೊದಲ ಸ್ಥಾನ ಪಡೆದುಕೊಂಡರು. ಇನ್ನು, 2.86 ನಿಮಿಷದಲ್ಲಿ ಗುಂಡು ಎತ್ತಿದ ಯಾದಗಿರಿ ಜಿಲ್ಲೆಯ ಶಹಾಪುರದ ಮರೆಪ್ಪ ಅವರು ಎರಡನೇ ಸ್ಥಾನ ಪಡೆದಿದ್ದು, ಕ್ರಮವಾಗಿ 10 ಮತ್ತು 5 ಸಾವಿರ ರೂ. ಬಹುಮಾನ ಪಡೆದು ಪರಾಕ್ರಮ ಮೆರೆದರು. ಇನ್ನು, ಕಂಪ್ಲಿಯ ಅಗಸರ ಮಾರುತಿ, ಯಾದಗಿರಿ ಜಿಲ್ಲೆ ಕೃಷ್ಣಾಪುರದ ವೆಂಕಟೇಶ್ ಅವರು ಗುಂಡುಗಳನ್ನು ಎತ್ತಲು ವಿಫಲರಾದರು. ಗುಂಡು ಎತ್ತುವ ಸ್ಪರ್ಧೆ ನೋಡಲು ಹೆಚ್ಚಿನ ಜನರು ಜಮಾಯಿಸಿದ್ದರು.

ಬಂಡಿಗಾಲಿ ಜೋಡಿಸೋ ಚಾಣಕ್ಯ

ಎತ್ತಿನಗಾಡಿಯ ಚಕ್ರಗಳನ್ನು ಬಿಚ್ಚಿ, ತೊಡಿಸುವ ಪಂದ್ಯಾವಳಿಯಲ್ಲಿ ಒಟ್ಟು 11 ಜನರು ಭಾಗವಹಿಸಿದ್ದರು. ಆ ಪೈಕಿ ಹೊಸಪೇಟೆಯ ಹನುಮಂತ ಅವರು 1.46 ನಿಮಿಷದಲ್ಲಿ ಗಾಲಿಗಳನ್ನು ಬಿಚ್ಚಿ, ಜೋಡಿಸುವ ಮೂಲಕ ಪ್ರಥಮ ಸ್ಥಾನಗಳಿಸಿದರು. ಅದರಂತೆ, ಹೊಸಪೇಟೆಯ ವೆಂಕೋಬ ಅವರು 2.15 ನಿಮಿಷಗಳಲ್ಲಿ ಹಾಗೂ ದೇವಪ್ಪ ಅವರು 2.25 ನಿಮಿಷದಲ್ಲಿ ಬಂಡಿಗಾಲಿಗಳನ್ನು ಜೋಡಿಸಿ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ತಮ್ಮದಾಗಿಸಿಕೊಂಡರು. ಕ್ರಮವಾಗಿ 10, 5 ಹಾಗೂ 3 ಸಾವಿರ ರೂ.ನಗದು ಹಾಗೂ ಪ್ರಶಸ್ತಿಯನ್ನು ಸ್ವೀಕರಿಸಿದರು. ಸಾಹಸಿಗಳ ಸಾಮರ್ಥ್ಯದ ಚಾಣಕ್ಷತನ ಪ್ರದರ್ಶಿಸಿದ್ದು, ನೋಡುಗರನ್ನು ನಿಬ್ಬೆರಗೋಳಿಸಿತು.

ಮಲಪನಗುಡಿಯಲ್ಲಿ ಬಂಡಿಗಾಲಿ ಜೋಡಿಸುವ ಸ್ಪರ್ಧೆಯಲ್ಲಿ ಕ್ರೀಡಾಪಟು. (ಚಿತ್ರ: ನಾಗರೆಡ್ಡಿ ಹಡಗಲಿ)