ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧದ ಮೊದಲ 2 ಏಕದಿನ ಪಂದ್ಯಗಳಲ್ಲಿ ಭಾರತ ತಂಡ ಮಳೆ ಅಡಚಣೆಯ ನಡುವೆಯೂ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಸರಣಿಯ ಮೂರನೇ ಏಕದಿನ ಪಂದ್ಯಕ್ಕೂ ಮಳೆ ಅಡಚಣೆ ಭೀತಿ ಎದುರಾಗಿದ್ದು, ಈ ಬಾರಿ ಸ್ಪಷ್ಟ ಫಲಿತಾಂಶ ಹೊರಹೊಮ್ಮಲು ವರುಣ ದೇವ ಅವಕಾಶ ಕಲ್ಪಿಸಬಹುದೇ ಎಂಬ ಅನುಮಾನವೂ ಮೂಡಿದೆ.
ಮೂರನೇ ಏಕದಿನ ಪಂದ್ಯ ಮಂಗಳವಾರ ಹ್ಯಾಮಿಲ್ಟನ್ನ ಸೆಡ್ಡನ್ ಪಾರ್ಕ್ ಮೈದಾನದಲ್ಲಿ ನಿಗದಿಯಾಗಿದ್ದು, ಈ ಪಂದ್ಯ ಗೆದ್ದುಕೊಂಡರೆ ಸರಣಿ ವಶಪಡಿಸಿಕೊಳ್ಳುವ ಅವಕಾಶ ಶುಭಮಾನ್ ಗಿಲ್ ಬಳಗದ ಮುಂದಿದೆ. ಆದರೆ ಭಾನುವಾರ ಭಾರತ ತಂಡ ಇಲ್ಲಿಗೆ ಆಗಮಿಸಿದಾಗಲೇ ಮಳೆಯ ಸ್ವಾಗತ ದೊರೆತಿದ್ದು, ಸೋಮವಾರ ಮತ್ತು ಭಾನುವಾರ ಇಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಾಮಾನ್ಯವಾಗಿ ನ್ಯೂಜಿಲೆಂಡ್ನಲ್ಲಿ ನವೆಂಬರ್ನಲ್ಲಿ ಮಳೆಯಾಗುವುದಿಲ್ಲ. ಆದರೆ ಈ ಬಾರಿ ನವೆಂಬರ್ ಆರಂಭದಿಂದಲೂ ನ್ಯೂಜಿಲೆಂಡ್ನೆಲ್ಲೆಡೆ ಮಳೆಯಾಗುತ್ತಿದೆ. ಇದರಿಂದ ತಂಪಾದ ವಾತಾವರಣ ಇರುವುದರಿಂದಲೇ ಸರಣಿಯ ಮೊದಲ 2 ಪಂದ್ಯಗಳ ವೇಳೆಯೂ ಪಿಚ್ ಬೌಲರ್ಗಳಿಗೆ ಹೆಚ್ಚಿನ ಸಹಕಾರ ನೀಡಿದೆ. ಆತಿಥೇಯ ನ್ಯೂಜಿಲೆಂಡ್ ತಂಡವೇ ಮೊದಲ 2 ಏಕದಿನಗಳಲ್ಲೂ ಸಂಪೂರ್ಣ 50 ಓವರ್ ಬ್ಯಾಟಿಂಗ್ ಮಾಡಲು ಶಕ್ತವಾಗಿರಲಿಲ್ಲ. ಇದೇ ಮೈದಾನಗಳಲ್ಲಿ ಆಡಿದ ಟಿ20 ಪಂದ್ಯಗಳಲ್ಲಿ ರನ್ಪ್ರವಾಹ ಹರಿದಿತ್ತು ಎಂಬುದು ಗಮನಾರ್ಹ.
ಅಕಾಲಿಕ ಮಳೆಯಿಂದಾಗಿ ಹ್ಯಾಮಿಲ್ಟನ್ನಲ್ಲಿ ಪಂದ್ಯಕ್ಕೆ ಪಿಚ್ ಸಿದ್ಧಪಡಿಸಲು ಕೂಡ ತೊಂದರೆಯಾಗಿದೆ ಎಂದು ಸೆಡ್ಡನ್ ಪಾರ್ಕ್ನ ಪಿಚ್ ಕ್ಯುರೇಟರ್ ಕರ್ಲ್ ಜಾನ್ಸನ್ ತಿಳಿಸಿದ್ದಾರೆ. ಆದರೆ ಮಳೆ ಬಂದರೂ ಮೈದಾನವನ್ನು ಬೇಗನೆ ಪಂದ್ಯಕ್ಕೆ ಸಜ್ಜುಗೊಳಿಸಬಹುದಾದ ಒಳಚರಂಡಿ ವ್ಯವಸ್ಥೆ ಇದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ಆಸೀಸ್ ದಾಖಲೆ ಮುರಿದ ಭಾರತ!
ಭಾರತ ತಂಡ ಹಾಲಿ ವರ್ಷ ಎಲ್ಲ ಮಾದರಿಯ ಕ್ರಿಕೆಟ್ ಸೇರಿ ನ್ಯೂಜಿಲೆಂಡ್ ವಿರುದ್ಧ ಒಟ್ಟಾರೆ 11 ಗೆಲುವು ದಾಖಲಿಸಿದೆ. ಈ ಮೂಲಕ ರಿಕಿ ಪಾಂಟಿಂಗ್ ಸಾರಥ್ಯದ ಆಸ್ಟ್ರೆಲಿಯಾ ತಂಡ 2005ರಲ್ಲಿ ನ್ಯೂಜಿಲೆಂಡ್ ವಿರುದ್ಧ ಒಟ್ಟು 10 ಗೆಲುವು ಸಾಧಿಸಿದ್ದ ದಾಖಲೆಯನ್ನು ಭಾರತ ಮುರಿದಿದೆ. ಆಸ್ಟ್ರೆಲಿಯಾ 21 ವರ್ಷಗಳ ಹಿಂದೆ 12 ಪಂದ್ಯಗಳಲ್ಲೇ 10 ಗೆಲುವು (ಟಿ20ಯಲ್ಲಿ 1, ಏಕದಿನದಲ್ಲಿ 7, ಟೆಸ್ಟ್ನಲ್ಲಿ 2) ಸಾಧಿಸಿದ್ದರೆ, ಭಾರತ ತಂಡ 16 ಪಂದ್ಯಗಳಲ್ಲಿ 11 ಗೆಲುವು ಸಾಧಿಸಿದೆ. ಭಾರತ ಹಾಲಿ ವರ್ಷ ಕಿವೀಸ್ ವಿರುದ್ಧ ಆಡಿದ 11 ಟಿ20 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿದ್ದರೆ, ಏಕದಿನದಲ್ಲಿ 5ರಲ್ಲಿ 3 ಗೆಲುವು ಸಾಧಿಸಿದೆ.