ಕ್ರೀಡೆ

ಎಚ್​ಎಎಲ್​ ಫುಟ್​ಬಾಲ್ ತಂಡಕ್ಕೆ2ನೇ ಸ್ಥಾನ

chandru

ಮಂಡ್ಯ: ಅಖಿಲ ಭಾರತ ಆಹ್ವಾನ ಫುಟ್​ಬಾಲ್ ಪಂದ್ಯಾವಳಿಯಲ್ಲಿ (ಮುಖ್ಯಮಂತ್ರಿ ಕಪ್) ಕೇರಳದ ಕೆಎಸ್​ಇಬಿ ತಂಡ ಚಾಂಪಿಯನ್ ಆಗಿದೆ. ಬೆಂಗಳೂರಿನ ಎಚ್​ಎಎಲ್ ತಂಡ ರನ್ನರ್ ಅಪ್​ಗೆ ತೃಪ್ತಿಪಟ್ಟುಕೊಂಡಿತು.

ನಗರದ ಸರ್ ಎಂ.ವಿ. ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯ ರೋಚಕವಾಗಿತ್ತು. ನಿಗದಿತ ಅವಧಿ ಮುಗಿದಾಗ ಉಭಯ ತಂಡಗಳೂ ಗೋಲು ಗಳಿಸಲು ವಿಫಲವಾಗಿದ್ದವು. ಇದರಿಂದ ಪೆನಾಲ್ಟಿ ಕಿಕ್ ಮೊರೆ ಹೋಗಬೇಕಾಯಿತು.

ಕೇರಳ ತಂಡ 5 ಬಾರಿಯೂ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸುವಲ್ಲಿ ಯಶಸ್ವಿಯಾದರೆ, ಎಚ್​ಎಎಲ್ ತಂಡ 3 ಬಾರಿಯಷ್ಟೇ ಯಶಸ್ವಿಯಾಗಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ವಿಜೇತ ತಂಡಕ್ಕೆ ಶಾಸಕರಾದ ಎಂ. ಶ್ರೀನಿವಾಸ್ ಹಾಗೂ ಸಿ.ಎಸ್. ಪುಟ್ಟರಾಜು ಮುಖ್ಯಮಂತ್ರಿ ಕಪ್ ನೀಡಿ ಅಭಿನಂದಿಸಿದರು. ಪ್ರಥಮ ಸ್ಥಾನ ಪಡೆದ ತಂಡಕ್ಕೆ 50 ಸಾವಿರ ರೂ. ನಗದು ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 25 ಸಾವಿರ ರೂ. ನಗದು ವಿತರಿಸಲಾಯಿತು.