ವಿಶ್ವ ಸಮರಕ್ಕೆ ಸಜ್ಜಾದ ಸಿಂದರೋವ್​-ಗುಕೇಶ್​ ಏಜೆನ್ಸಿ
ಕ್ರೀಡೆ

ಇಂದಿನಿಂದ ಚದುರಂಗ ವಿಶ್ವ ಸಮರ; ಗುಕೇಶ್​ಗೆ ಸಿಂದರೋವ್​ ಸವಾಲು

ವಿಶ್ವ ಚಾಂಪಿಯನ್​ ನಿರ್ಧಾರಕ್ಕೆ ಡಿ.12ರವರೆಗೆ ಒಟ್ಟು 14 ಕ್ಲಾಸಿಕಲ್​ ಚೆಸ್​ ಪಂದ್ಯಗಳು ನಡೆಯಲಿವೆ. ಮೊದಲು 7.5 ಅಂಕ ಗಳಿಸುವ ಆಟಗಾರ ವಿಜೇತರಾಗಲಿದ್ದಾರೆ.

ಜಿನೀವಾ (ಸ್ವಿರ್ಜಲೆಂಡ್​): ಬಹುನಿರೀಕ್ಷಿತ ಫಿಡೆ ವಿಶ್ವ ಚೆಸ್​ ಚಾಂಪಿಯನ್​ಷಿಪ್​ ಹಣಾಹಣಿ ಮಂಗಳವಾರದಿಂದ ಸ್ವಿರ್ಜಲೆಂಡ್​ನಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್​ ಭಾರತದ ದೊಮ್ಮರಾಜು ಗುಕೇಶ್​ಗೆ ಉಜ್ಬೇಕಿಸ್ತಾನದ ಗ್ರಾಂಡ್​ಮಾಸ್ಟರ್​ ಜಾವೋಖಿರ್​ ಸಿಂದರೋವ್​ ಸವಾಲೊಡ್ಡಲಿದ್ದಾರೆ. ಮುಖಾಮುಖಿಯ ವಿಜೇತರಿಗೆ ವಿಶ್ವ ಚಾಂಪಿಯನ್​ ಪಟ್ಟ ಒಲಿಯಲಿದೆ. ಭಾನುವಾರ ನಡೆದ ಡ್ರಾ ಪ್ರಕಾರ, ಡಿ. ಗುಕೇಶ್​ ಮೊದಲ ಪಂದ್ಯದಲ್ಲಿ ಕಪ್ಪು ಕಾಯಿಯಲ್ಲಿ ಆಡಲಿದ್ದಾರೆ.

2024ರಲ್ಲಿ 18ನೇ ವಯಸ್ಸಿನಲ್ಲೇ ಅತಿ ಕಿರಿಯರಾಗಿ ವಿಶ್ವ ಚಾಂಪಿಯನ್​ ಪಟ್ಟವೇರಿದ ಬಳಿಕ ಚೆನ್ನೈನ ಡಿ. ಗುಕೇಶ್​ ಲಯ ಕಳೆದುಕೊಂಡಿದ್ದಾರೆ. ನಂತರದಲ್ಲಿ ಆಡಿದ ಬಹುತೇಕ ಟೂರ್ನಿಗಳಲ್ಲಿ ಅವರು ನಿರಾಸೆ ಅನುಭವಿಸಿದ್ದಾರೆ. ಹೀಗಾಗಿ ಈ ಬಾರಿ ಅವರಿಗೆ ಚಾಂಪಿಯನ್​ ಪಟ್ಟ ಉಳಿಸಿಕೊಳ್ಳಲು ಸಾಧ್ಯವಾಗಬಹುದೇ ಎಂಬ ಪ್ರಶ್ನೆ ಇದೆ. ಅಲ್ಲದೆ ಎದುರಾಳಿ ಸಿಂದರೋವ್​ ಸದ್ಯ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಚೆಸ್​ ವಿಶ್ವಕಪ್​ ಮತ್ತು ಕ್ಯಾಂಡಿಡೇಟ್ಸ್​ ಟೂರ್ನಿ ಎರಡರಲ್ಲೂ ಅವರು ಅತ್ಯುತ್ತಮ ನಿರ್ವಹಣೆ ತೋರಿ ಪ್ರಶಸ್ತಿ ಗೆದ್ದುಕೊಂಡಿದ್ದರು.

ಫಿಡೆ ವಿಶ್ವ ರ್ಯಾಂಕಿಂಗ್​ನಲ್ಲಿ ಸದ್ಯ ಇವರಿಬ್ಬರ ಸ್ಥಾನವೂ ದೊಡ್ಡ ಅಂತರದಲ್ಲಿದೆ. ಗುಕೇಶ್​ 2,710 ರೇಟಿಂಗ್​ ಅಂಕದೊಂದಿಗೆ 26ನೇ ಸ್ಥಾನಕ್ಕೆ ಕುಸಿದಿದ್ದರೆ, ಸಿಂದರೋವ್​ 2,782 ರೇಟಿಂಗ್​ ಅಂಕದೊಂದಿಗೆ 4ನೇ ಸ್ಥಾನದಲ್ಲಿದ್ದಾರೆ. ಇಬ್ಬರ ನಡುವೆ 72 ರೇಟಿಂಗ್​ ಅಂಕಗಳ ಅಂತರವಿದೆ.

ಗುಕೇಶ್​ ಹಾಲಿ ವರ್ಷ ಮಾರ್ಚ್​ನಲ್ಲಿ ಆಡಿದ ಪ್ರಾಗ್​ ಮಾಸ್ಟರ್ಸ್​, ಜೂನ್​ನಲ್ಲಿ ಆಡಿದ ನಾರ್ವೆ ಚೆಸ್​ ಮತ್ತು ಜುಲೈನಲ್ಲಿ ಆಡಿದ ಚೆನ್ನೈ ಗ್ರಾಂಡ್​ ಮಾಸ್ಟರ್ಸ್​ ಟೂರ್ನಿಗಳಲ್ಲಿ ಕೊನೆಯ ಅಥವಾ ಜಂಟಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಹೀಗಾಗಿ 2 ವರ್ಷಗಳ ಹಿಂದೆ ಚೀನಾದ ಡಿಂಗ್​ ಲಿರೆನ್​ಗೆ ಸವಾಲೊಡ್ಡಿ ವಿಶ್ವ ಚಾಂಪಿಯನ್​ ಪಟ್ಟ ಒಲಿಸಿಕೊಂಡಿದ್ದಕ್ಕಿಂತ ಈ ಬಾರಿ ಅದನ್ನು ಉಳಿಸಿಕೊಳ್ಳುವುದೇ ಗುಕೇಶ್​ಗೆ ಕಠಿಣ ಸತ್ವಪರೀೆ ಎನಿಸಿದೆ. ಕ್ಲಾಸಿಕಲ್​ ಚೆಸ್​ನಲ್ಲಿ ಗುಕೇಶ್​ ವಿರುದ್ಧ ಇದುವರೆಗೆ ಆಡಿರುವ 2 ಪಂದ್ಯಗಳಲ್ಲೂ ಗೆದ್ದ ಮೇಲುಗೈ ಸಿಂದರೋವ್​ ಅವರದಾಗಿದೆ. ಆದರೆ ಗುಕೇಶ್​ಗೆ ಈ ಹಿಂದೆ ವಿಶ್ವ ಚಾಂಪಿಯನ್​ಷಿಪ್​ ಆಡಿದ ಅನುಭವವಿರುವುದು ಪ್ರಮುಖ ಬಲವೆನಿಸಿದೆ.

*ಆರಂಭ: ರಾತ್ರಿ 7.30

*ನೇರಪ್ರಸಾರ: ಫಿಡೆ ಯುಟ್ಯೂಬ್​ ಚಾನಲ್​, ಚೆಸ್​ಬೇಸ್​ ಇಂಡಿಯಾ ವೆಬ್​ಸೈಟ್​.

*ನಾನಿಲ್ಲಿಗೆ ಯಾವುದನ್ನೂ ರಕ್ಷಿಸಿಕೊಳ್ಳಲು ಬಂದಿಲ್ಲ. ಬದಲಾಗಿ ಮತ್ತೊಮ್ಮೆ ಗೆಲ್ಲಲು ಬಂದಿದ್ದೇನೆ. ಈ ಮನಸ್ಥಿತಿಯಲ್ಲೇ ನಾನಿದ್ದೇನೆ.

| ಡಿ. ಗುಕೇಶ್​

*ನನಗೆ ಗೆಲುವಿಗೆ 50-50 ಅವಕಾಶವಿದೆ ಎಂದೇ ನಂಬಿದ್ದೇನೆ. ಯಾಕೆಂದರೆ ಇದು ಕಠಿಣ ಕಾದಾಟ ಮತ್ತು 14 ಪಂದ್ಯಗಳನ್ನು ಆಡಬೇಕಿದೆ. ಏನು ಬೇಕಾದರೂ ನಡೆಯಬಹುದು.

| ಜಾವೋಖಿರ್​ ಸಿಂದರೋವ್​

14 ಪಂದ್ಯಗಳ ಕಾದಾಟ

ವಿಶ್ವ ಚಾಂಪಿಯನ್​ ನಿರ್ಧಾರಕ್ಕೆ ಡಿ.12ರವರೆಗೆ (ಡಿ.1, 5, 9 ವಿಶ್ರಾಂತಿ ದಿನ) ಒಟ್ಟು 14 ಕ್ಲಾಸಿಕಲ್​ ಚೆಸ್​ ಪಂದ್ಯಗಳು ನಡೆಯಲಿವೆ. ಮೊದಲು 7.5 ಅಂಕ ಗಳಿಸುವ ಆಟಗಾರ ವಿಜೇತರಾಗಲಿದ್ದಾರೆ. 14 ಪಂದ್ಯಗಳ ಅಂತ್ಯಕ್ಕೆ ಅಂಕ 7-7 ಸಮಬಲವಾದರೆ, ಡಿ.12ಕ್ಕೆ ಟೈಬ್ರೇಕರ್​ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ. 14 ಪಂದ್ಯಗಳಲ್ಲಿ ಮೊದಲ 40 ನಡೆಗಳಿಗೆ 120 ನಿಮಿಷ ಸಮಯ ನೀಡಲಾಗುತ್ತದೆ. 41ನೇ ನಡೆಯಿಂದ 30 ಸೆಕೆಂಡ್​ ನೀಡಲಾಗುತ್ತದೆ. 40 ನಡೆಗಳ ಬಳಿಕವಷ್ಟೇ ಆಟಗಾರರು ಪರಸ್ಪರ ಒಪ್ಪಿಗೆಯ ಮೇರೆಗೆ ಡ್ರಾ ಸಾಧಿಸಲು ಅವಕಾಶ ಕಲ್ಪಿಸಲಾಗುತ್ತದೆ.

ಒಟ್ಟು 23 ಕೋಟಿ ರೂ. ಬಹುಮಾನ

ವಿಶ್ವ ಸಮರದ ಒಟ್ಟು ಬಹುಮಾನ ಮೊತ್ತ 23.16 ಕೋಟಿ ರೂ. (2.5 ದಶಲಕ್ಷ ಡಾಲರ್​). ಪ್ರತಿ ಪಂದ್ಯದ ಗೆಲುವಿಗೆ 1.85 ಕೋಟಿ ರೂ. ನೀಡಲಾಗುತ್ತದೆ. ಬಾಕಿ ಮೊತ್ತವನ್ನು ಇಬ್ಬರು ಆಟಗಾರರಿಗೆ ಸಮಾನವಾಗಿ ಹಂಚಲಾಗುತ್ತದೆ. ಒಂದು ವೇಳೆ ವಿಜೇತರ ನಿರ್ಧಾರ ಟೈಬ್ರೇಕರ್​ ಮೂಲಕ ಆದರೆ ಆಗ ಚಾಂಪಿಯನ್​ಗೆ 12.04 ಕೋಟಿ ರೂ. ಮತ್ತು ರನ್ನರ್​ಅಪ್​ಗೆ 11.11 ಕೋಟಿ ರೂ. ನೀಡಲಾಗುತ್ತದೆ.

ಅತಿ ಕಿರಿಯರ ಕದನ​

ಗುಕೇಶ್​-ಸಿಂದರೋವ್​ ಇಬ್ಬರಿಗೂ 20 ವರ್ಷ. ಹೀಗಾಗಿ ಇದು ಚೆಸ್​ ಇತಿಹಾಸದಲ್ಲೇ ಇಬ್ಬರು ಅತ್ಯಂತ ಕಿರಿಯ ಆಟಗಾರರ ನಡುವಿನ ವಿಶ್ವ ಚಾಂಪಿಯನ್​ಷಿಪ್​ ಕಾದಾಟವೆನಿಸಿದೆ. ಗ್ಯಾರಿ ಕ್ಯಾಸ್ಪರೋವ್​ 1985ರಲ್ಲಿ 22 ವರ್ಷ ಮತ್ತು ಮ್ಯಾಗ್ನಸ್​ ಕಾರ್ಲ್​ಸೆನ್​ 2013ರಲ್ಲಿ 22 ವರ್ಷ ವಯಸ್ಸಿನಲ್ಲಿ ವಿಶ್ವ ಚಾಂಪಿಯನ್​ಷಿಪ್​ ಪಂದ್ಯವಾಡಿದ್ದ ಇನ್ನಿಬ್ಬರು ಕಿರಿಯರು. ಆದರೆ ಕ್ಯಾಸ್ಪರೋವ್​ ಎದುರಾಳಿ ಅನಟೊಲಿ ಕಪೋರ್ವ್​ಗೆ 34 ವರ್ಷ ಆಗಿದ್ದರೆ, ಕಾರ್ಲ್​ಸೆನ್​ ಎದುರಾಳಿ ವಿಶ್ವನಾಥನ್​ ಆನಂದ್​ಗೆ ಆಗ 44 ವರ್ಷ ವಯಸ್ಸಾಗಿತ್ತು.

ಗುಕೇಶ್​ಗೆ ಆನಂದ್​ ಕಿವಿಮಾತು

ಐದು ಬಾರಿಯ ವಿಶ್ವ ಚಾಂಪಿಯನ್​ ಹಾಗೂ ಡಿ. ಗುಕೇಶ್​ ಅವರ ಗುರು ವಿಶ್ವನಾಥನ್​ ಆನಂದ್​ ಚಾಂಪಿಯನ್​ ಪಟ್ಟ ಉಳಿಸಿಕೊಳ್ಳಲು ತನ್ನ ಶಿಷ್ಯನಿಗೆ ಕಿವಿಮಾತು ಹೇಳಿದ್ದಾರೆ. ಫಾರ್ಮ್​ ಬಗ್ಗೆ ಹೆಚ್ಚು ಕಳವಳ ಪಡದೆ, ನಿನ್ನ ಚೆಸ್​ ಆಟವನ್ನು ಆನಂದಿಸು. ಚಿಂತೆ ಮಾಡುವುದರಿಂದ ನಿರ್ವಹಣೆ ಸುಧಾರಿಸುವುದಿಲ್ಲ ಎಂದು ಆನಂದ್​ ತಿಳಿಸಿದ್ದಾರೆ.